ಕ್ರೀಡಾ ಜಗತ್ತಿನಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಇದೀಗ ಕೇಂದ್ರ ಸರ್ಕಾರ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದ ಕುರಿತು ಕೆಲವರು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದರೆ ಇನ್ನೂ ಕೆಲವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಟ್ವೀಟ್ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ, ಕ್ರೀಡಾಪಟುಗಳಿಗೆ ನೀಡಲಾಗುವ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರನ್ನು ಇಟ್ಟಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಇದಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್ ಕ್ರೀಡಾ ಪ್ರಶಸ್ತಿಗಳ ಹೆಸರನ್ನು ಬದಲಾಯಿಸಿದ ಹಾಗೆ ಕ್ರೀಡಾಂಗಣಗಳ ಹೆಸರನ್ನು ಸಹ ಬದಲಾಯಿಸಿ ಅವುಗಳಿಗೆ ಕ್ರೀಡಾಪಟುಗಳ ಹೆಸರನ್ನು ಇಟ್ಟರೆ ಇನ್ನಷ್ಟು ಚೆನ್ನಾಗಿರುತ್ತದೆ ಎಂದು ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ಏಟು ನೀಡಿದ್ದಾರೆ. ಹೌದು ಇತ್ತೀಚೆಗಷ್ಟೇ ಅಹ್ಮದಾಬಾದ್ ನಲ್ಲಿರುವ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಹೆಸರನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಎಂದು ಬದಲಾಯಿಸಲಾಗಿತ್ತು. ಹೀಗಾಗಿ ಇರ್ಫಾನ್ ಪಠಾಣ್ ಮಾಡಿರುವ ಟ್ವೀಟ್ ನರೇಂದ್ರಮೋದಿ ಸ್ಟೇಡಿಯಂ ಹೆಸರನ್ನು ತೆಗೆದುಹಾಕಿ ಯಾರಾದರೂ ಕ್ರಿಕೆಟರ್ ಹೆಸರನ್ನು ಇಡೀ ಎಂಬರ್ಥದಲ್ಲಿದೆ. ಹೀಗೆ ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಇರ್ಫಾನ್ ಪಠಾಣ್ ಏಟು ಕೊಟ್ಟಿದ್ದಾರೆ.