ನರೇಗಾದಡಿ ತಂತ್ರಜ್ಞಾನ, ಪಾರದರ್ಶಕತೆ ಕಾಂಗ್ರೆಸ್ಸಿಗೆ ಸವಾಲು: ಸಂಸದ ಗೋವಿಂದ ಕಾರಜೋಳ
ಬೆಂಗಳೂರು: ನರೇಗಾ ಯೋಜನೆಯಡಿ ಅಳವಡಿಸಲಾಗಿರುವ ವಿನೂತನ ತಂತ್ರಜ್ಞಾನ ಹಾಗೂ ಪಾರದರ್ಶಕ ವ್ಯವಸ್ಥೆ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಭ್ರಷ್ಟಾಚಾರ ಮಾಡಿ ಖಜಾನೆಯಿಂದ ಹಣ ಎತ್ತಿಕೊಂಡು ಹೋಗಲಾಗುತ್ತಿತ್ತು. ಈಗ ಅದು ಸಾಧ್ಯವಾಗದಂತಾಗಿದೆ. ಅದರಿಂದಲೇ ಹೊಟ್ಟೆ ಉರಿಯಿಂದ ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗಾಂಧಿ ಹೆಸರನ್ನು ಅಳಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ರಾಜ್ಯದಲ್ಲೇ 25 ಯೋಜನೆಗಳಿಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹೆಸರು ಇರುವುದು ಸಾಕ್ಷಿ. ಶೈಕ್ಷಣಿಕ ಸಂಸ್ಥೆಗಳಲ್ಲಿ 55 ರಾಜೀವ್ ಗಾಂಧಿ, 21 ಇಂದಿರಾ ಗಾಂಧಿ ಹಾಗೂ 22 ನೆಹರೂ ಹೆಸರಿನ ಸಂಸ್ಥೆಗಳಿವೆ ಎಂದು ವಿವರಿಸಿದರು.
ಪ್ರತಿ ಕ್ರೀಡಾಕೂಟಕ್ಕೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಜನರನ್ನು ಮೋಸ ಮಾಡಲಾಗಿದೆ. ಇದರಿಂದ ನಿಜವಾದ ಗಾಂಧಿಯನ್ನು ಮರೆತುಬಿಟ್ಟವರು ಕಾಂಗ್ರೆಸ್ ನಾಯಕರೇ ಎಂದು ಟೀಕಿಸಿದರು.
ನರೇಗಾ ಯೋಜನೆಯಡಿ ಈಗ ಎಲ್ಲಾ ವರ್ಗದವರಿಗೂ ಅವಕಾಶವಿದೆ. ಯಾರು ಬೇಕಾದರೂ ಕೆಲಸಕ್ಕೆ ಬರಬಹುದು. ಆದರೆ ಶ್ರೀಮಂತ ವರ್ಗದವರು ಕೂಲಿ ಕೆಲಸಕ್ಕೆ ಬರುವುದಿಲ್ಲ ಎಂಬುದು ವಾಸ್ತವ ಎಂದು ಅವರು ಹೇಳಿದರು.






