ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಏರುತ್ತಿದೆ. ಅಖಾಡ ಸಿದ್ಧವಾಗಿದೆ. ರಣಕಲಿಗಳು ರಣೋತ್ಸಾಹದಲ್ಲಿದ್ದಾರೆ. ಗೆದ್ದೇ ಗೆಲ್ಲುತ್ತೇವೆಂಬ ಛಲ ಉಪ ಚುನಾವಣಾ ಅಖಾಡಲ್ಲಿರುವ ಅಭ್ಯರ್ಥಿಗಳದ್ದು. ಅನರ್ಹಶಾಸಕರೆಂಬ ಹಣೆಪಟ್ಟಿಕಟ್ಟಿಕೊಂಡು ಸದ್ಯ ತಮ್ಮ ಹೊಸ ಪಕ್ಷ ಬಿಜೆಪಿ ಪರವಾಗಿ ಕದನಕ್ಕೆ ರೆಡಿಯಾಗಿರುವ ಕ್ಯಾಂಡಿಡೇಟ್ ಗಳಿಗಂತೂ ದೊಡ್ಡ ಅಗ್ನಿ ಪರೀಕ್ಷೆ.
ಈ ನಡುವೆ ಭಾರತೀಯ ಜನತಾ ಪಾರ್ಟಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಈ ಬಾರಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಸಂಸದರಾದ ತೇಜಸ್ವಿಸೂರ್ಯ ಮತ್ತು ಅನಂತ್ ಕುಮಾರ್ ಹೆಗಡೆಗೆ ಕೋಕ್ ನೀಡಲಾಗಿದೆ. ಅನಂತ್ ಕುಮಾರ್ ಹೆಗಡೆಗೆ ಅವರ ವಿವಾದಾತ್ಮಕ ಹೇಳಿಕೆಗಳೇ ಕಡೆಗಣನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅದೇರೀತಿ ಹಿರಿಯ ನಾಯಕರಾದ ಸಂಸದ ವಿ ಶ್ರೀನಿವಾಸ್ ಪ್ರಸಾದ್, ಎಸ್ ಎಂಕೃಷ್ಣ ಅವರೂ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ. ನಟ ಜಗ್ಗೇಶ್, ನಟಿ ಮಾಳವಿಕಾ ಕೂಡ ಕಡೆಗಣಿಸಲ್ಪಟ್ಟಿದ್ದಾರೆ.
ನಳಿನ್ ಕುಮಾರ್ ಕಟೀಲ್, ಬಿ ಎಸ್ ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಡಿ ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಬಿ ಎಲ್ ಸಂತೋಷ್, ಮುರುಳಿಧರ ರಾವ್, ಅರುಣ್ ಕುಮಾರ್, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ ಪಟ್ಟಿಯಲ್ಲಿ ಮೊದಲ 10 ಸ್ಥಾನದಲ್ಲಿ ಸ್ಥಾನಪಡೆದಿದ್ದಾರೆ.