Navratri 2024: ನವರಾತ್ರಿ 8ನೇ ದಿನ; ಮಹಾಗೌರಿ ಪೂಜೆ ಮಹತ್ವ, ಮುಹೂರ್ತ, ಮಂತ್ರದ ಬಗ್ಗೆ ತಿಳಿಯಿರಿ!
ನವರಾತ್ರಿ ಎಂಟನೇ ದಿನ ಸ್ವರೂಪ ಮಹಾಗೌರೀ ಎಂದಾಗಿರುತ್ತದೆ. ಆಕೆಯ ಬಣ್ಣ ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಇನ್ನು ಆ ಬಿಳಿಯ ಬಣ್ಣಕ್ಕೆ ಉಪಮೆಯಂತೆ ಶಂಖ, ಚಂದ್ರ ಮತ್ತು ಕುಂದ ಪುಷ್ಪಗಳನ್ನು ಉಲ್ಲೇಖಿಸಲಾಗಿದೆ. ಇನ್ನು ಆ ತಾಯಿಯ ವಯಸ್ಸು ಎಂಟು ವರ್ಷಗಳು ಮಾತ್ರ. “ಅಷ್ಟ ವರ್ಷಾ ಭವೇದ್ ಗೌರೀ” ಎನ್ನಲಾಗುತ್ತದೆ. ಆಕೆ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ. ಅಷ್ಟೇ ಅಲ್ಲ, ಆಕೆಯ ಆಭರಣಗಳೂ ಬಿಳಿಯೇ. ಆಕೆಗೆ ನಾಲ್ಕು ಭುಜಗಳು. ಇನ್ನು ಅವಳ ವಾಹನ ವೃಷಭ ಹಾಗೂ ಅದು ಕೂಡ ಬೆಳ್ಳಗಿದೆ. ಆ ತಾಯಿಯ ಬಲಕೈ ಮೇಲು ಭಾಗವು ಅಭಯ ಮುದ್ರೆಯನ್ನು ಪ್ರದರ್ಶಿಸುತ್ತಿದ್ದು, ಕೆಳಗಿನ ಬಲಕೈಯಲ್ಲಿ ತ್ರಿಶೂಲ ಇದೆ. ಅದೇ ರೀತಿ ಎಡಭಾಗದ ಮೇಲು ಕೈನಲ್ಲಿ ಡಮರು ಹಾಗೂ ಕೆಳಗಿನ ಎಡಕೈನಲ್ಲಿ ವರದ ಮುದ್ರೆಯಿದೆ. ಆ ತಾಯಿಯ ಮುದ್ರೆಯು ಶಾಂತವಾಗಿದೆ.
ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯ ಸಮಯದಲ್ಲಿ, ತಾಯಿ ದುರ್ಗೆಯ 9 ರೂಪಗಳನ್ನು ವಿಧಿ – ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ನವರಾತ್ರಿಯ ದಿನಗಳಲ್ಲಿ, ದುರ್ಗಾ ದೇವಿಯು ಒಂಬತ್ತು ದಿನಗಳವರೆಗೆ ಭೂಮಿಗೆ ಬಂದು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಅದೇ ರೀತಿ ನವರಾತ್ರಿಯ ಎಂಟನೇ ದಿನವನ್ನು ಮಾತೆ ಮಹಾಗೌರಿಗೆ ಸಮರ್ಪಿಸಲಾಗಿದೆ
ಮಹಾಗೌರಿಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿ ಸುಖ, ವ್ಯಾಪಾರ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ. ಮಹಾಗೌರಿಯು ಭಕ್ತರ ತೊಂದರೆಗಳನ್ನು ತ್ವರಿತವಾಗಿ ನಿವಾರಿಸುತ್ತಾಳೆ ಎಂಬ ಧಾರ್ಮಿಕ ನಂಬಿಕೆ ಇದೆ. ಆಕೆಯನ್ನು ಪೂಜಿಸುವುದರಿಂದ ಅಸಾಧ್ಯವಾದ ಕಾರ್ಯಗಳು ಸಹ ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.
ಶಾರದೀಯ ನವರಾತ್ರಿಯ ಅಷ್ಟಮಿ ತಿಥಿ ಅಕ್ಟೋಬರ್ 10 ರಂದು ಮಧ್ಯಾಹ್ನ 12:31 ಕ್ಕೆ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 11 ರಂದು 12:05 ಕ್ಕೆ ಕೊನೆಗೊಳ್ಳುತ್ತದೆ. ಇದಾದ ಬಳಿಕ ನವಮಿ ತಿಥಿ ಆರಂಭವಾಗಲಿದೆ. ಉದಯತಿಥಿ ನಿಮಿತ್ತ ನ.11ರಂದು ಅಷ್ಟಮಿ ಹಾಗೂ ನವಮಿಯ ಉಪವಾಸ ನಡೆಯಲಿದೆ.
ಯಾರೀ ಮಹಾಗೌರಿ?
ಪವರ್ತರಾಜನ ಮಗಳಾಗಿ ಜನಿಸಿದ ಪಾರ್ವತಿ ದೇವಿಯು ಶಿವನಿಗಾಗಿ ಕಠಿಣ ತಪಸ್ಸನ್ನು ಮಾಡಿದಳು. ಆಕಾಶವನ್ನು ಹೊದಿಕೆಯಾಗಿ, ಭೂಮಿಯನ್ನು ಹಾಸಿಗೆಯಾಗಿ, ಆಹಾರವಿಲ್ಲದೆ ಅತ್ಯಂತ ತಪ್ಪಸ್ಸು ಮಾಡಿದಳು ಪಾರ್ವತಿ ದೇವಿ. ಈ ತಪಸ್ಸಿಗೆ ಮೆಚ್ಚಿದ ಆ ಪರಶಿವನು ಪ್ರತ್ಯಕ್ಷನಾಗಿ ಪಾರ್ವತಿಯನ್ನು ಮದುವೆಯಾದನು.
ಪಾರ್ವತಿಯ ದೇಹ ಕಠಿಣ ತಪಸ್ಸಿನಿಂದಾಗಿ ಕಪ್ಪಾಗಿ ಹೋಗಿತ್ತು. ಹೀಗಾಗಿ ಶಿವನೇ ಪವಿತ್ರ ಗಂಗಾನದಿಯಲ್ಲಿ ಆಕೆಯ ದೇಹವನ್ನು ತೊಳೆದು ಆಕೆಯನ್ನು ಪ್ರಕಾಶಮಾನವಾಗಿ ಮಾಡಿದನು. ನಂತರ ಈಕೆಯನ್ನ ಮಹಾಗೌರಿ ಎಂದು ಕರೆಯಲಾಯಿತು.
ಮಹಾಗೌರಿ ಪೂಜಾ ಫಲವೇನು?
ಮಹಾಗೌರಿ ಶುದ್ಧತೆ, ಪ್ರಶಾಂತತೆ ಮತ್ತು ಶಾಂತಿಯನ್ನು ಸಂಕೇತಿಸುತ್ತಾಳೆ. ಮಹಾಗೌರಿಯನ್ನು ಪೂಜಿಸಿದರೆ ಭಕ್ತರಿಗೆ ಬಹಳಷ್ಟು ಪುಣ್ಯ ಸಿಗುತ್ತದೆ. ಜೀವನದಲ್ಲಿ ದು:ಖಗಳನ್ನು ದೂರ ಮಾಡಿ, ಸಂಕಷ್ಟಗಳನ್ನು ಪರಿಹಾರ ಮಾಡುತ್ತಾಳೆ. ಅಲ್ಲದೆ ಆಸೆ ಈಡೇರುವ ಮಾರ್ಗಗಳನ್ನೂ ತಾಯಿ ದೇವಿ ತೋರುತ್ತಾಳೆ. ಜೀವನದಲ್ಲಿ ಅಂದುಕೊಂಡ ಗುರಿ ಮುಟ್ಟಲು ತಾಯಿ ನೆರವಾಗುತ್ತಾಳೆ.
ಮಹಾಗೌರಿ ಸ್ವರೂಪ
ಮಹಾಗೌರಿಯ ಚಿತ್ರವನ್ನು ನಾಲ್ಕು ಕೈಗಳಿಂದ ಚಿತ್ರಿಸಲಾಗಿದೆ. ಒಂದು ಬಲಗೈಯಲ್ಲಿ ತ್ರಿಶೂಲ ಮತ್ತು ಎರಡನೇ ಬಲಗೈಯಲ್ಲಿ ಅಭಯ ಮುದ್ರೆ, ಇನ್ನೊಂದು ಕೈಯಲ್ಲಿ ಡಮರು, ಇನ್ನೊಂದರಲ್ಲಿ ವರದ ಮುದ್ರೆಯನ್ನು ಹಿಡಿದಿದ್ದಾಳೆ. ಈಕೆಯ ವಾಹನ ಗೂಳಿಯಾಗಿದೆ.
ಮಹಾ ಅಷ್ಟಮಿ ಪೂಜಾ ವಿಧಾನ
– ಅಷ್ಟಮಿ ತಿಥಿಯಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.
– ತಾಯಿಗೆ ನೀರು, ಹೂವು, ಧೂಪ, ದೀಪ, ನೈವೇದ್ಯ, ಶ್ರೀಗಂಧ, ಕುಂಕುಮ, ಅಲಂಕಾರಿಕ ವಸ್ತು ಇತ್ಯಾದಿಗಳನ್ನು ಅರ್ಪಿಸಿ.
– ಮಾತಾ ರಾಣಿಯನ್ನು ವಿಧಿವಿಧಾನಗಳ ಪ್ರಕಾರ ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸಿ ಪೂಜಿಸಿ
– ಮಾತಾ ಮಹಾಗೌರಿಗೆ ಆರತಿ ಮಾಡಿ. ಮಂತ್ರಗಳನ್ನು ಪಠಿಸಿ.
ಮಹಾಗೌರಿಗೆ ಅರ್ಪಣೆ
ಪುರಾಣದ ಪ್ರಕಾರ ಮಾತೆ ಮಹಾಗೌರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತೆಂಗಿನಕಾಯಿಯಿಂದ ಮಾಡಿದ ವಿವಿಧ ಖಾದ್ಯಗಳನ್ನು ಅರ್ಪಿಸುವುದರಿಂದ ತಾಯಿ ಮೆಚ್ಚುಗೆಗೆ ನೀವು ಪಾತ್ರರಾಗುವಿರಿ
ಮಹಾಗೌರಿಯ ಮಂತ್ರ
ಸರ್ವಮಂಗಳ ಮಾಂಗಲ್ಯೆ, ಶಿವ ಸರ್ವಾರ್ಥ ಸಾಧಿಕೆ.
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ।
ವಂದನಾ ಮಂತ್ರ
ಶ್ವೇತೇ ವೃಷೇ ಸಮೃದ್ಧಾ ಶ್ವೇತಾಮ್ಬರಧರ ಶುಚಿಃ ।
ಮಹಾಗೌರೀ ಶುಭಂ ದದ್ಯನ್ಮಹಾದೇವಪ್ರಮೋದದಾ ।
ಮಹಾಗೌರಿಯ ಸ್ತೋತ್ರ ಪಠಣ
ಸರ್ವಸಂಕತ್ ಹನ್ತ್ರೀ ತ್ವನ್ಹಿ ಧನ ಐಶ್ವರ್ಯ ಪ್ರದಯಾನೀಮ್ ॥
ಜ್ಞಾನದಾ ಚತುರ್ವೇದ್ಮಯೀ ಮಹಾಗೌರೀ ಪ್ರಣಾಮಭ್ಯಹಮ್