ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪಕೊಡಲೇ…? ನುಡಿಮುತ್ತುಗಳ ಪೋಣಿಸಿ ನಿನ್ನೆದುರು ನೇರವಾಗಿಯೇ ಹೇಳಿಬಿಡಲೇ….? ಯಾವುದೂ ತೋಚದಾಗಿದೆ….!
ಸಾಕಷ್ಟು ನೋವುಂಡು…ಸಾಕಿನ್ನು , ಇನ್ನುಳಿದ ಯಾರ? ಯಾವುದರ ಉಸಾಬುರಿಯೂ ಬೇಡವೆಂದು ಸುಮ್ಮನಿದ್ದೆ...’ಆಕಸ್ಮಿಕ’ವಾದ ನಿನ್ನ ಭೇಟಿ….ಮತ್ತದೇ ಮೇಲೆಳಲಾಗದ ಬಾವಿಗೆ ನನ್ನ ನೂಕಿದೆ.
ನಿನ್ನ ಬಳಿ ಎಲ್ಲವನ್ನೂ ಹೇಳಿ ಬಿಡಲೇ…? ಹೇಳಲಾಗದು…ಇನ್ನೇನು ಇಂದು ಎಲ್ಲವನ್ನೂ ಹೇಳಿ ಬಿಡುತ್ತೇನೆ ಎಂದಾಗ ಯಾರದ್ದೋ ದೂರವಾಣಿ ಕರೆ ನಿನಗೆ…! ಅಲ್ಲಿ ಮಾತು ಮೌನ…! ಏನೋ ಹೇಳಲು ಹೊರಟಿದ್ದೀಯ? ಏನೇಳು? ಸಾರಿ….ನನ್ನ ಅಣ್ಣ ಕಾಲ್ ಮಾಡಿದ್ದು ಅಂದಾಗ ಮನಸ್ಸು ನಿರಾಳ…!
ಮತ್ತೆ ದೈರ್ಯ ತಂದುಕೊಂಡು ಹ್ಞೂಂ ಈಗಲೇ ಹೇಳಿ ಬಿಡ್ತೀನಿ ಎಂದು ನಿಶ್ಚಯಿಸಿದ ಮರುಗಳಿಗೆ ನಾವಿದ್ದಲ್ಲಿಗೆ ಇನ್ಯಾರದ್ದೋ ಎಂಟ್ರಿ….! ಹೀಗೆ ಹೇಳಬೇಕೆಂಬ ಮಾತುಗಳು ಹಾಗೇ ಉಳಿದುಕೊಳ್ಳುತ್ತಿವೆ.
ಕಾಲ ಮರೆಯಾಗುತ್ತಿದೆ ಎಂಬ ಆತಂಕ ನನ್ನೊಳಗೆ…ನಾಳೆ ಎನ್ನುವುದನ್ನು ಎಂದೂ ನಂಬದ ನಾನು ಈ ವಿಷಯದಲ್ಲಿ ನಾಳೆ ನಾಳೆ ನಾಳೆ ಎಂದು ಗ್ಯಾರೆಂಟಿ ಇಲ್ಲದ ದಿನ , ಕ್ಷಣ, ಗಳಿಗೆಗೆ ಕಾದಿದ್ದೇನೆ.
ಉರಿದುರಿದು ಬೀಳುತ್ತೇನೆ, ಇದ್ದಕ್ಕಿದ್ದಂತೆ ಕೆಂಡಮಂಡಲನಾಗುತ್ತೇನೆ ಯಾಕೀಗೆ ಆಗ್ತಿದೆ..?
ಇದು ನನ್ನ ತಪ್ಪ? ಖಂಡಿತಾ ಅಲ್ಲ…! ನನ್ನ ಮನಸ್ಸಿನ ತಪ್ಪು…ಏಕಾಂಗಿಯಾಗಿರುವ ಹೃದಯದ ತಪ್ಪು…!
ಪ್ರೀತಿ ಮಾಡುವುದಲ್ಲ…ಅದು ಹುಟ್ಟುವುದು…ನಾನಿನ್ನ ಪ್ರೀತಿ ಮಾಡ್ತಿದ್ದೀನಿ ಎನ್ನಲಾಗದು. ನಿನ್ನ ಮೇಲೊಂದು ಅವ್ಯಕ್ತ ಭಾವನೆ ಮೊಳಕೆಯೊಡೆದಿದೆ….ಉಳಿದ ಅಷ್ಟೂ ದಿನಗಳನ್ನು ನಿನ್ನೊಡನೆಯೇ ಕಳೆಯಬೇಕು ಅನಿಸಿದೆ….ಹೇಳಲಾಗದ, ವಿಳಾಸವಿಲ್ಲದ ಈ ಭಾವನೆಗೆ ‘ಪ್ರೀತಿ’ ಎಂದು ನಾಮಕರಣ ಮಾಡಿರುವೆ.
ನೀನೂ ಸಹ ಜಗತ್ತೇ ಕೇಳುವಂತೆ…ನನ್ನ ಹೆಸರಿಡಿದು ಕರೆದು ಪ್ರೀತಿಸುವೆ ಎಂದು ಹೇಳಬೇಕೆಂಬ ಆಸೆ ನನ್ನದು. ಕೊನೇಪಕ್ಷ ನನ್ನ ಕಿವಿಯಲ್ಲಿ ‘ಪ್ರೀತಿಸ್ತೀನಿ, ಪ್ರೀತಿಸ್ತೀನಿ,ಪ್ರೀತಿಸ್ತೀನಿ’ ಅಂತ ಮೂರು ಬಾರಿ ಹೇಳಿಬಿಡು.
ಕೊನೆಯ ತನಕ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತೀನಿ ಅಂತ ನಾನು ಹೇಳಲಾರೆ…! ಎಷ್ಟೋ ದಿನಗಳಿಂದ ನನ್ನ ಕಂಡಿರುವ ನಿನಗೆ ನನ್ನ ಜೊತೆಯಲ್ಲಿ ಹೆಜ್ಜೆ ಹಾಕುವ ಭರವಸೆ ಇದ್ದರೆ ಮಾತ್ರ ಒಪ್ಪಿಕೋ…ನಿನಗೆ ಬಿಟ್ಟಿದ್ದು, ನಾ ಮಾತ್ರ ಪ್ರೀತಿಸ್ತಿದ್ದೀನಿ, ಕ್ಷಮಿಸು ನನಗೆ ನಿನ್ನ ಮೇಲೆ ಪ್ರೀತಿ ಹುಟ್ಟಿದೆ. ಅದನ್ನು ನಿನ್ನ ಬಳಿ ಬಂದು ಹೇಳಲಾಗ್ತಿಲ್ಲ!
ಹೇಳದೇ ಹಾಗೇ ಇದ್ದು ಬಿಡಲು ಸಾಧ್ಯವಿಲ್ಲ…ಹೇಳಿದರೆ ..? ನಿನ್ನಿಂದ ಬರುವ ಪ್ರತಿಕ್ರಿಯೆ ಹೇಗಿರುತ್ತೋ ಎಂಬ ತಳಮಳ.
ಸುಲಭವಲ್ಲ…ಈ ಕೂಡಲೇ ಹೇಳಿ ಬಿಡು ಎಂದು ಹೇಳಿದಷ್ಟು ಸುಲಭವಲ್ಲ ಹೇಳೋದು…! ನಾನಂತೂ ಒಪ್ಪಿಕೊಳ್ಳುವೆ….ಈ ವಿಷಯದಲ್ಲಿ ತುಂಬಾನೇ ವೀಕು.
ನೀ ಎದುರು ಬಂದಾಗ …ನಿನ್ನೇ ನೋಡುತ್ತಾ ಕಳೆದು ಹೋಗುವ ನಾನು…ನೀ ಇರದಿರುವಾಗ ನಿನ್ನ ನೆನಪಲ್ಲೇ ಕಳೆದು ಹೋಗಿರುತ್ತೇನೆ.
ಭಾವನೆಗಳ ಜೊತೆಗೆ ಆಟ ಆಡುವುದು ನಾನು ಕಲಿತಿಲ್ಲ..ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೂ ಇಲ್ಲ.
ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ನೀನು ನನ್ನೂ , ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡರೆ, ಜೀವನ ಪಾವನ…!
ನಾನು ಸೋತೆ…ನೀ ಮನಸೋತಿದ್ದರೆ ತಡಮಾಡದೇ ಹೇಳಿಬಿಡು….ದಯವಿಟ್ಟು ಕಾಯಿಸಬೇಡ. ನಾನಂತೂ ಮಾತಿಗಿಳಿಯದ ಮುಟ್ಟಾಳ… ನೀನಾದರು ಹೇಳಿ ಬಿಡು..!