ಮಂತ್ರಿಯಾಗಬೇಕೆಂಬ ಆಸೆಯಿಂದ ರಾಜಕಾರಣಕ್ಕೆ ಬಂದವನು ನಾನಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಉತ್ತಮ ಕೆಲಸ ಮಾಡಬೇಕೆನ್ನುವುದು ನನ್ನ ಧ್ಯೇಯ. ಹಾಗಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು.
ನನಗೆ ಪತ್ರಕರ್ತರ ಸಂವೇದನೆಯಿದೆ. ನಾನು ಅಂತರಂಗದಲ್ಲಿ ಪತ್ರಕರ್ತ ಎಂದು ಹೇಳಿದರು. ನಾನು ಟಿಪಿಕಲ್ ರಾಜಕಾರಣಿಯಲ್ಲ.ಕೆಲಸ ಮಾಡಲಷ್ಟೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ ಎಂದರು. ಸಿದ್ದರಾಮಯ್ಯ ಅವರು ಇಡೀ ಸರ್ಕಾರವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ನನ್ನ ಸೋಲಿಸಲು ಅವರು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಅದು ಸಾಧ್ಯವಾಗಲಿಲ್ಲ.
ನನ್ನನ್ನು ಸೋಲಿಸುವುದಕ್ಕಾಗಿಯೇ ತಮಗೆ ಬೇಕಾದ ಅಭ್ಯರ್ಥಿಯನ್ನು ಹಾಕಿಸಿಕೊಂಡರು.ಆದರೆ ಅದು ಸಾಧ್ಯವಾಗಲಿಲ್ಲ ಎಂದರು. ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ ಅವರು, ನನ್ನ ಗೆಲುವಿಗೆ ಶ್ರಮಸಿದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಇದೇ ವೇಳೆ ಅವರು ತಿಳಿಸಿದರು.ಮುಂದಿನ 5 ವರ್ಷದಲ್ಲಿ ಏರ್‍ಪೆಫೋರ್ಟ್ ಮೇಲ್ದರ್ಜೆ ಮತ್ತು ಹತ್ತು ಲೇನ್ ಹೈವೆ ಕಾಮಗಾರಿ ಸಂಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದರು.
ಮೈಸೂರು-ಬೆಂಗಳೂರು ವಿಮಾನ ಹಾರಾಟ :ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೈಸೂರು-ಬೆಂಗಳೂರು ನಡುವೆ ಜೂ.7ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ಉಡಾನ್ 3ನೆ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕಿಸುವ ಅಂಗವಾಗಿ ಜೂ.7 ರಿಂದ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.