ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ
ತುಮಕೂರು: ಮುಂದೆ ನಾನು ಯಾವ ಬಾವುಟ ಹಿಡಿಯಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, “2004ರಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೈಟ್‌ವಾಶ್ ಮಾಡಿದ್ದೆವು. ಆಗ ಕಾಂಗ್ರೆಸ್‌ನ್ನು ಸಂಪೂರ್ಣ ಮುಗಿಸಿದ್ದೆವು. ಈಗ ಮತ್ತೆ ಆ ಸಂದರ್ಭ ಬರುತ್ತದೆಯೋ ಗೊತ್ತಿಲ್ಲ,” ಎಂದು ಹೇಳಿದರು.
ಇಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿರಲಿಲ್ಲ. ಅದು ಏಕೆ ಎಂಬುದನ್ನು ನಾನೂ ತಿಳಿದಿಲ್ಲ. ಮುಂದೆ ನಾನು ಯಾವ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂದು ರಾಜಣ್ಣ ಸ್ಪಷ್ಟಪಡಿಸಿದರು.
ಜನರ ಬೆಂಬಲವೇ ನನಗೆ ಆನೆ ಬಲ. ಜನರನ್ನು ನಂಬಿ ನಾನು ರಾಜಕಾರಣ ಮಾಡುತ್ತಿದ್ದೇನೆ. ನನಗೂ ಮಧುಗಿರಿಗೂ ಒಂದು ವಿಶೇಷ ಋಣಾನುಬಂಧವಿದೆ. ತುಮಕೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದ ನನಗೆ, ಮಧುಗಿರಿ ಕ್ಷೇತ್ರದ ಜನರು ರಾಜಕೀಯ ಜನ್ಮ ನೀಡಿದರು ಎಂದು ರಾಜಣ್ಣ ಹೇಳಿದರು.






