ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, “ಈ ಸಾವುಗಳಿಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಸವಾಲು ಹಾಕಿದ್ದಾರೆ.
‘ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡೇ ನೀಡುತ್ತೇವೆ’ ಎಂದು ಶ್ವೇತಭವನದಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ದಾಳಿ ಸಂಬಂಧ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜೋ ಬೈಡನ್, ಐಎಸ್‌ಐಎಲ್ ಸಂಘಟನೆ ಈ ಬಾಂಬ್ ದಾಳಿ ಹಿಂದಿದೆ ಎಂದು ದೃಢಪಡಿಸಿದ್ದಾರೆ. ‘ಈ ದಾಳಿ ನಡೆಸಿದವರೊಂದಿಗೆ, ಅಮೆರಿಕಕ್ಕೆ ಹಾನಿ ಮಾಡಲು ಆಶಿಸಿದವರಿಗೆ ಈ ವಿಷಯ ತಿಳಿದಿರಲಿ; ನಾವು ಇದನ್ನು ಮರೆಯುವುದಿಲ್ಲ, ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ. ಇದಕ್ಕೆ ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ’ ಎಂದು ಭಾವನಾತ್ಮಕವಾಗಿದ್ದಾರೆ.
‘ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಅದು ಖಚಿತವಾದ ಬಳಿಕ ನಾವು ಅವರನ್ನು ಬೇಟೆಯಾಡದೇ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ನಮ್ಮ ಜನರ ಹಿತಾಸ್ತಿಯನ್ನು ಕಾಯ್ದುಕೊಳ್ಳುತ್ತೇವೆ. ಈ ದಾಳಿ ಹೊರತಾಗಿ ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಗುರುವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ 13 ಅಮೆರಿಕ ಯೋಧರು ಹಾಗೂ 60ಕ್ಕೂ ಹೆಚ್ಚು ಅಫ್ಘಾನ್ ನಾಗರಿಕರನ್ನು ಕೊಲ್ಲಲಾಗಿದೆ.

ಉಗ್ರರ ಕೌರ್ಯ ಮತ್ತು ಅಟ್ಟಹಾಸಕ್ಕೆ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರ ಸಾಕ್ಷಿಯಾಗಿತ್ತು. ಗುರುವಾರ ಸಂಜೆ ವೇಳೆಗೆ ನಡೆದ ಎರಡು ಸ್ಫೋಟದಲ್ಲಿ ಸುಮಾರು 60 ಮಂದಿ ಪ್ರಾಣ ಕಳೆದುಕೊಂಡಿದ್ದರೆ 120ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ