ಕೆಲ ದಿನಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದಂತ ಕೆಜಿಎಫ್ ಬಾಬುಗೆ ಕಾಂಗ್ರೆಸ್ ನಿಂದ ಎಂಎಲ್ಸಿ ಚುನಾವಣೆಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ಸಚಿವ ಎಸ್.ಟಿ.ಸೋಮಶೇಖರ್ ( Minister ST Somashekhar ) ಆರೋಪಕ್ಕೆ, ಸಂಸಾರ ಸಮೇತರಾಗಿ ಮಾಧ್ಯಮಗಳ ಮುಂದೆ ಬಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಯಾನೆ ಕೆಜಿಎಫ್ ಬಾಬು ( Congress MLC Candidate KGF Babu ) ಕಣ್ಣೀರಿಡುತ್ತಲೇ ಉತ್ತರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅವರ ಎರಡನೇ ಪತ್ನಿ ಶಾಝಿಯ ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರು ಇಲ್ವಾ ಎಂದು ಖಾರವಾಗೇ ಕಿಡಿಕಾರಿದ್ದಾರೆ.
ಈ ಕುರಿತಂತೆ ಸಂಸಾರ ಸಮೇತರಾಗಿ ಪತಿಯೊಂದಿಗೆ ಇಂದು ಸುದ್ಧಿಗೋಷ್ಠಿಯಲ್ಲಿ ಹಾಜರಾದಂತ ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿ ಯೂಸೂಫ್ ಷರೀಫ್ ಯಾನೆ ಕೆಜಿಎಫ್ ಬಾಬು ಅವರ ಎರಡನೇ ಪತ್ನಿ ಶಾಝಿಯಾ ಮಾತನಾಡಿ, ನಾನು ಗೌರವಾನ್ವಿತ ಸಚಿವರಲ್ಲಿ ಕೇಳುತ್ತೇನೆ.. ನಿಮ್ಮನೆಯಲ್ಲಿ ಜಗಳ ಆಗೋದಿಲ್ವಾ.? ನಿಮ್ಮ ಮನೆಯಲ್ಲಿ ಯಾರು ಮಹಿಳೆಯರು ಇಲ್ವಾ.? ನಿಮ್ಮ ಮನೆಯಲ್ಲಿ ಅಕ್ಕ ತಂಗಿಯರು ಇಲ್ವಾ.? ಯಾಕೆ ನೀವು ರಾಜಕೀಯದಲ್ಲಿ ಕುಟುಂಬವನ್ನು ಎಳೆದು ತರುತ್ತೀರಿ ಎಂದರು.
ನನ್ನ ಗಂಡ ಒಳ್ಳೆಯ ಮನುಷ್ಯ. ಮಕ್ಕಳಿಗೆ ಒಳ್ಳೆಯ ತಂದೆಯಾಗಿದ್ದಾರೆ. ಹೀಗಿರುವಾಗ ಏಕೆ ರಾಜಕೀಯ ದುರುದ್ದೇಶಕ್ಕೆ ಸಂಸಾರದ ನಾಲ್ಕು ಗೋಡೆಯ ವಿಚಾರವನ್ನು ಹೊರಗೆ ಎಳೆದು ತರುತ್ತೀರಿ.? ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರು ಇಲ್ವಾ.? ನಿಮ್ಮ ಮನೆಯಲ್ಲಿ ಮಗಳು ಇಲ್ವಾ.? ಇಲ್ಲ ಅಂದ್ರೇ ನಮ್ಮ ಮಗಳನ್ನು ನಿಮ್ಮ ಮಗಳ ಸ್ಥಾನದಲ್ಲಿ ಇಟ್ಟು ಮಾತನಾಡಿ ಎಂದು ಕಿಡಿಕಾರಿದರು.
ಈ ರಾಜಕೀಯದಲ್ಲಿ ಸಂಸಾರವನ್ನು ಎಳೆದು ತರಬೇಡಿ. ರಾಜಕೀಯ ಸೇವೆಯನ್ನು ಮಾಡೋ ಕಾರಣಕ್ಕಾಗಿ ನನ್ನ ಗಂಡ ಪರಿಷತ್ ಚುನಾವಣೆಗೆ ನಿಂತಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಕೊನೆಗೊಳಿಸಿ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋದಕ್ಕೆ ಸಂಸಾರವನ್ನು ಬೀದಿಗೆ ಎಳೆದು ತರಬೇಡಿ ಸಚಿವರೇ ಎಂದು ಕೈಮುಗಿದು ಬೇಡಿಕೊಂಡರು.