ಸ್ಟಾರ್ ನಟರ ಸಿನಿಮಾಗಳೆಲ್ಲವೂ ಬಹುತೇಕ ಒಂದೇ ಮಾದರಿಯಲ್ಲಿರುತ್ತವೆ. ಅಲ್ಲಿ ಕತೆಗಿಂತಲೂ ಹೆಚ್ಚು ನಾಯಕನ ಇಮೇಜು ಹೆಚ್ಚು ಮಾಡುವುದು, ಬಿಲ್ಡಪ್ ಡೈಲಾಗ್, ನಾಲ್ಕು ಫೈಟ್, ಇಂಟ್ರೊಡಕ್ಷನ್ ಹಾಡು ಇಂಥಹುವೇ ತುಂಬಿರುತ್ತವೆ. ನಾಯಕನನ್ನು ವೈಭವೀಕರಿಸುವುದು ಬಿಟ್ಟರೆ ಸಿನಿಮಾದಲ್ಲಿ ಇನ್ನೇನೂ ಇರುವುದಿಲ್ಲ.
ಕನ್ನಡದಲ್ಲಿಯೂ ಸ್ಟಾರ್ ನಾಯಕರ ಸಿನಿಮಾಗಳು ಇದೇ ರೀತಿ ಇವೆ. ಆದರೆ, ಸ್ವತಃ ಮಾಸ್ ಹೀರೋ ಆಗಿರುವ ಸುದೀಪ್ ಇಂಥಹಾ ಕತೆಗಳಿಗೆ, ಇಂಥಹಾ ಸಿನಿಮಾಗಳಿಗೆ ಅಂತ್ಯ ಹಾಡಬೇಕು ಎಂದಿದ್ದಾರೆ. ಆ ಮೂಲಕ ಮಾಸ್ ಅಥವಾ ಬಿಲ್ಡಪ್ ಮಾದರಿ ಸಿನಿಮಾಗಳಿಂದ ಸ್ಟಾರ್ ನಾಯಕ ನಟರು ಹೊರಗೆ ಬರಬೇಕು, ಹೀರೋ ಅನ್ನು ಗಮನದಲ್ಲಿಟ್ಟುಕೊಂಡು ಕತೆ ಬರೆಯುವುದನ್ನು ಸಹ ನಿರ್ದೇಶಕರು ಕೈ ಬಿಡಬೇಕು ಎಂದು ಸುದೀಪ್ ಹೇಳಿದ್ದಾರೆ.
‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆ ಆದ ಬಳಿಕ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ”ನಾಯಕನ ನಟರಿಗಾಗಿ ಕತೆಯನ್ನು ಬರೆಯುವುದು ಬಿಡಬೇಕು” ಎಂದಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಬಿಲ್ಡಪ್‌ಗಿರಿಯನ್ನೂ ಬಿಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
”ಸಿನಿಮಾದಲ್ಲಿ ಇಂಟ್ರೊಡಕ್ಷನ್ ಸೀನ್ ಮಾತ್ರ ನಿಮ್ಮ ಸ್ಟಾರ್‌ಡಮ್ ಮೇಲೆ ನಡೆಯುತ್ತದೆ. ಅದಕ್ಕೆ ಬೇಕಾದಂತೆ ಸೀನ್ ಬರೆಯಬೇಕು ಆದರೆ ಅದರ ನಂತರ ಆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಏನು ಕೊಡುತ್ತಿದ್ದೀಯ ಎಂಬುದೇ ಮುಖ್ಯವಾಗುತ್ತದೆ. ಇಂಟ್ರೊಡಕ್ಷನ್ ಸೀನ್‌ಗೆ ನಟರ ಜನಪ್ರಿಯತೆಯಿಂದ ಶಿಳ್ಳೆಗಳು ಬೀಳುತ್ತವೆ ಅದಾದ ನಂತರ ಮುಂದೇನು? ಅವರಿಗೆ ನೀನು ಯಾವ ಕತೆ ಹೇಳುತ್ತೀಯ ಎಂಬುದು ಮುಖ್ಯವಾಗುತ್ತದೆ. ಈಗಲೂ ಅದೇ ‘ನಾನು ಬಂದ್ರೆ ಹಾಗೆ, ನಾನು ಹೊಡೆದ್ರೆ ಹೀಗೆ’ ಎಂದುಕೊಂಡು ಇತಿಹಾಸ ಇಟ್ಟುಕೊಂಡು ಕತೆ ಹೇಳಲು ಹೊರಟರೆ ಅದು ಸರಿಯಲ್ಲ. ಪ್ರತಿ ಸಿನಿಮಾವೂ ಹೊಸ ಹೋರಾಟ. ಸಿನಿಮಾ ಮುಗಿದಾಗ ಈ ಸಿನಿಮಾ ಮೂಲಕ ಜನರಿಗೆ ನೀವು ಏನು ಹೇಳಿದಿರಿ, ಜನರನ್ನು ಖುಷಿ ಪಡಿಸಿದ್ದೀರಾ ಎಂದು ಕೇಳುತ್ತಾರೆ” ಎಂದಿದ್ದಾರೆ ಸುದೀಪ್.