ಒಂದೇ ಸಿನಿಮಾದ ಹೀರೋ ಹಾಗೂ ನಿರ್ದೇಶಕ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಅದೂ ಅವರ ಸಿನಿಮಾ ತೆರೆಗೆ ಬರುವ ಮುನ್ನವೇ! ಕನ್ನಡದಲ್ಲಿ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಸಂಯುಕ್ತ2’ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಡಿ.ಎಸ್.ಮಂಜುನಾಥ್ ‘ಪ್ರೆಸೆಂಟ್ ಪ್ರಪಂಚ 0% ಲವ್’ ಹೆಸರಿನ ಸಿನಿಮಾ ಮೂಲಕ ನಾಯಕರಾಗಿದ್ದರು. ಆದರೆ ಈ ಸಿನಿಮಾ ತರೆಗೆ ಬರುವ ಮುನ್ನವೇ ಕೆಲವೇ ದಿನಗಳ ಹಿಂದೆ ಕೊರೊನಾದಿಂದಾಗಿ ನಿಧನ ಹೊಂದಿದರು. ಇದೀಗ ಇದೇ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಅಭಿರಾಮ್ ಸಹ ಕೊರೊನಾದಿಂದ ನಿಧನ ಹೊಂದಿದ್ದಾರೆ.
ಅಭಿರಾಮ್‌ಗೆ ಕೆಲವು ದಿನಗಳಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ನಿರ್ಲಕ್ಷ್ಯ ಮಾಡಿ ಕೋವಿಡ್ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಲಿಲ್ಲ. ನಿನ್ನೆಯಿಂದ ಅಭಿರಾಮ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇಂದು (ಮೇ 28) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಸಿನಿಮಾದ ಚಿತ್ರೀಕರಣ ಮುಗಿದಿತ್ತು, ಲಾಕ್‌ಡೌನ್ ಮುಗಿದ ನಂತರ ಸಿನಿಮಾವನ್ನು ತೆರೆಗೆ ತರಲು ಸಿದ್ಧವಾಗಿದ್ದರು. ಆದರೆ ಕನಸು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಪ್ರೀತಿಯನ್ನು ಬಿಟ್ಟು ಹಣದ ಹಿಂದೆ ಓಡುವ ಕತೆಯನ್ನು ಈ ಸಿನಿಮಾ ಹೊಂದಿದೆ.