ಟೀಮ್ ಇಂಡಿಯಾದ ಮಾಜಿ ನಾಯಕ, ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಹೆಮ್ಮೆಯ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವೃತ್ತಿ ಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ವರ್ಲ್ಡ್ಕಪ್ನಲ್ಲಿ ಈಗಾಗಲೇ ಭಾರತ ಸೆಮಿಫೈನಲ್ನಲ್ಲಿ ಸೋತು ಟೂರ್ನಿಯಿಂದ ಹೊರಬಂದಿದೆ.
ವಿಶ್ವಕಪ್ಗೆ ಮುಂಚೆನಿಂದಲೂ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗಲೂ ಧೋನಿ ಯಾವಾಗ ಬೇಕಾದರೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳೇ ಎಲ್ಲೆಡೆ ಹರಿದಾಡುತ್ತಿದೆ. ಈ ನಡುವೆ ನಿವೃತ್ತಿ ನಂತರ ಮಾಹಿ ಏನ್ ಮಾಡ್ತಾರೆ, ಅವರ ಸೆಕೆಂಡ್ ಇನ್ನಿಂಗ್ಸ್ ಏನೆಂಬ ಬಗ್ಗೆ ಚರ್ಚೆ ಆಗುತ್ತಿದೆ.
ಧೋನಿ ನಿವೃತ್ತಿ ನಂತರ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಮುಖಂಡರೊಬ್ಬರು ಹೇಳೋ ಪ್ರಕಾರ ಧೋನಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಎಂಎಸ್ ಧೋನಿ ಈಗ ‘ನರೇಂದ್ರ ಮೋದಿ ಟೀಮ್’ ಸೇರಿ ರಾಜಕೀಯದಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ ಅಂತ ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್ ಹೇಳಿದ್ದಾರೆ.
ಧೋನಿ ಬಿಜೆಪಿ ಸೇರಬಹುದು. ಈ ವಿಷಯದ ಬಗ್ಗೆ, ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಆದರೆ ಅದು ಅವರ ನಿವೃತ್ತಿಯ ನಂತರವೇ ತೆಗೆದುಕೊಳ್ಳುವ ನಿರ್ಧಾರ ಎಂದಿದ್ದಾರೆ.
ಲೋಕಸಭೆಗೂ ಮುನ್ನ ಅಮಿತ್ ಶಾ ಸಂಪರ್ಕ್ ಫಾರ್ ಸಮರ್ಥನ್ ಅಂದರೆ ಸಮರ್ಥನೆಗಾಗಿ ಸಂಪರ್ಕ ಅನ್ನೋ ಅಭಿಯಾನ ಕೈಗೊಂಡಿದ್ದರು. ಈ ಅಭಿಯಾನದಡಿ ಅಗಸ್ಟ್ 5, 2018ರಂದು ಮಹೇಂದ್ರ ಸಿಂಗ್ ಧೋನಿ ನಿವಾಸಕ್ಕೆ ಭೇಟಿ ನೀಡಿ, ಧೋನಿ ಬೆಂಬಲ ಕೋರಿದ್ದನ್ನೂ ಕೂಡ ಈ ವೇಳೆ ಸ್ಮರಿಸಬಹುದು.