ಉನ್ನಾವೋ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್, ಅವರನ್ನು ಕೊಲ್ಲಿಸುವ ಷಡ್ಯಂತ್ರ ಹೂಡಿತ್ತು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗಂಭೀರ ಆರೋಪ ಮಾಡಿದ್ದಾರೆ.
ನೇತಾಜಿ ಅವರ 124ನೇ ಜನ್ಮ ಜಯಂತಿ ಅಂಗವಾಗಿ ನಿನ್ನೆ(ಜ.23-ಶನಿವಾರ) ಸ್ವಕ್ಷೇತ್ರ ಉನ್ನಾವೋದಲ್ಲಿ ಮಾತನಾಡಿದ ಸಾಕ್ಷಿ ಮಹಾರಾಜ್, ನೇತಾಜಿ ಅವರ ದಾರುಣ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.
ದೇಶದಲ್ಲಿ ನೇತಾಜಿ ಅವರ ಜನಪ್ರಿಯತೆ ಆ ದಿನಗಳಲ್ಲಿ ಶಿಖರ ತಲುಪಿತ್ತು. ಇಡೀ ದೇಶ ನೇತಾಜಿ ಅವರೊಂದಿಗೆ ಹೋರಾಡಲು ಸಿದ್ಧವಾಗಿತ್ತು. ಕಾಂಗ್ರೆಸ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಕೂಡ ಬೋಸ್ ಅವರ ಜನಪ್ರಿಯತೆಗೆ ಸಮನಾಗರಿಲಿಲ್ಲ. ಇದು ಕಾಂಗ್ರೆಸ್‌ಗೆ ಪಥ್ಯವಾಗಲಿಲ್ಲ ಎಂದು ಸಾಕ್ಷಿ ಮಹಾರಾಜ್ ಅಭಿಪ್ರಾಯಪಟ್ಟರು.
ನೇತಾಜಿ ಅವರನ್ನು ಹೇಗಾದರೂ ಮಾಡಿ ಜನಮಾನಸದಿಂದ ದೂರ ಮಾಡಬೇಕು ಎಂದು ಹವಣಿಸುತ್ತಿದ್ದ ಕಾಂಗ್ರೆಸ್, ಇದಕ್ಕಾಗಿ ಭಾರೀ ಸಂಚನ್ನೇ ರೂಪಿಸಿತ್ತು ಎಂದು ಸಾಕ್ಷಿ ಮಹಾರಾಜ್ ನೇರವಾಗಿ ಆರೋಪ ಮಾಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಮಾನ ದುರಂತದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿರುವ ಸಾಕ್ಷಿ ಮಹಾರಾಜ್, ವಿಮಾನ ದುರಂತದಲ್ಲಿ ದೇಶ ಓರ್ವ ಅಪ್ರತಿಮ ಹೋರಾಟಗಾರನನ್ನು ಕಳೆದುಕೊಂಡಿತು ಎಂದು ಖೇದ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ನೇತಾಜಿ ಸಾವಿನಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ ಎಂದು ಹೇಳಬಹುದು.
ನೇತಾಜಿ ಅವರನ್ನು ಕೊಲ್ಲಿಸಿದ್ದು ಕಾಂಗ್ರೆಸ್ ಎಂದ ಸಂಸದ
Date: