ಬದಲಾವಣೆ ಜಗದ ನಿಯಮ ಎನ್ನುವ ಹಾಗೆ, ನ್ಯೂಸ್ 18 ವಾಹಿನಿಯಲ್ಲಿ ಬದಲಾವಣೆ ನಿರಂತರವಾಗಿ ನಡೀತಾನೆ ಇದೆ. ಸದ್ಯ ಹಿಂದೆಂದಿಗಿಂತಲೂ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು, ಬಲಿಷ್ಠ ತಂಡವೊಂದು ವಾಹಿನಿಯನ್ನ ಮುನ್ನಡೆಸುವ ಜವಾಬ್ದಾರಿಯನ್ನ ಹೊತ್ತುಕೊಂಡಿದೆ. ಈ ಮೊದಲು ಈಟಿವಿ ನ್ಯೂಸ್ ಹೆಸರಿನಿಂದ ಕನ್ನಡಿಗರ ಮನೆ ಮಾತಾಗಿದ್ದ ವಾಹಿನಿ ಇತ್ತೀಚೆಗಷ್ಟೇ ನ್ಯೂಸ್ 18 ಕನ್ನಡ ಎಂದು ಬದಲಾಗಿದೆ. ಆರಂಭದಲ್ಲಿ ಜಿ.ಎನ್. ಮೋಹನ್ ಈಟಿವಿ ನ್ಯೂಸ್ನ ನೇತೃತ್ವ ವಹಿಸಿದ್ದರು. ಬಳಿಕ ರಂಗನಾಥ ಭಾರದ್ವಾಜ್ ಸಾರಥ್ಯ ವಹಿಸಿಕೊಂಡರು. ಕೆಲ ತಿಂಗಳಲ್ಲೇ ಶಿವಮೊಗ್ಗ ಮೂಲದ ದೆಹಲಿ ಪತ್ರಕರ್ತ ಡಿ.ಪಿ. ಸತೀಶ್ ಜವಾಬ್ದಾರಿ ಹೊತ್ತುಕೊಂಡಿದ್ದರು. ಆನಂತರದಲ್ಲಿ ಅನಂತ್ ಚಿನಿವಾರ್ ವಾಹಿನಿಯ ಎಡಿಟರ್ ಇನ್ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದರು. ಕೆಲವೇ ವರ್ಷಗಳಲ್ಲಿ ನಾಲ್ಕೈದು ಸಂಪಾದಕರನ್ನು ಕಂಡಂತಾ ನ್ಯೂಸ್18ನಲ್ಲಿ ಈಗ ಮತ್ತೆ ಹೊಸ ತಂಡ ರೆಡಿಯಾಗಿದೆ.
ಇಲ್ಲಿಗೆ ಒಂದು ವರ್ಷದ ಹಿಂದಷ್ಟೇ ಸುದ್ದಿ ಟಿವಿಯಿಂದ ಹೊರಬಂದ ಲಕ್ಷ್ಮಣ್ ಹೂಗಾರ್, ಸಂಪಾದಕೀಯ ಸಲಹೆಗಾರರಾಗಿ ನ್ಯೂಸ್18 ಸೇರಿದ್ದರು. ಇತ್ತೀಚೆಗಷ್ಟೇ ಸುವರ್ಣ ವಾಹಿನಿ ತೊರೆದ ಡೇರ್ ಡೆವಿಲ್ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಕೂಡ ನ್ಯೂಸ್18 ವಾಹಿನಿ ಸೇರಿದ್ದಾರೆ. ಇನ್ನು ಕಳೆದ ವಾರವಷ್ಟೇ ಸುವರ್ಣ ವಾಹಿನಿಯ ಪ್ರೋಗ್ರಾಮ್ ಎಡಿಟರ್ ಆಗಿದ್ದ ಸಿದ್ದು ಕಾಳೋಜಿ ಹಾಗೂ ಪ್ರೊಡಕ್ಷನ್ ಹೆಡ್ ಆಗಿದ್ದಂತಾ ಸ್ವರೂಪ್ ಮುರಗೋಡು ಅವರು ಕೂಡ ನ್ಯೂಸ್18 ಸೇರಿದ್ದಾರೆ.
ಸದ್ಯಕ್ಕೆ ವಿಜಯಲಕ್ಷ್ಮಿ ಶಿಬರೂರು, ಲಕ್ಷ್ಮಣ್ ಹೂಗಾರ್, ಸಿದ್ದು ಕಾಳೋಜಿ ಹಾಗೂ ಸ್ವರೂಪ್ ಅವರೇ ನ್ಯೂಸ್18 ಕನ್ನಡ ವಾಹಿನಿಯ ಕೋರ್ ಟೀಮ್. ವಾಹಿನಿಯ ಎಡಿಟರ್ ಇನ್ ಚೀಫ್ ಹುದ್ದೆ ಖಾಲಿ ಇದೆ. ಆದರೆ ಈಗಾಗಲೇ ಈ ಹುದ್ದೆಗೆ ಅನೇಕ ಹೆಸರುಗಳು ಚಾಲ್ತಿಗೆ ಬಂದಿವೆ. ಅವುಗಳ ಪೈಕಿ ಪ್ರಜಾ ಟಿವಿಯ ಮುಖ್ಯಸ್ಥ ಮನೋಜ್, ದಿಗ್ವಿಜಯ ವಾಹಿನಿಯ ಸಂಪಾದಕ ಚೇತನ್ ಸೇರಿದಂತೆ ಹಲವು ಹೆಸರುಗಳು ಚಾಲ್ತಿಯಲ್ಲಿವೆ. ಒಟ್ಟಾರೆ, ಕನ್ನಡ ಸುದ್ದಿವಾಹಿನಿಗಳ ಟಿಆರ್ಪಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿರುವ ನ್ಯೂಸ್18 ಕನ್ನಡ, ಬದಲವಾಣೆ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಅಂದರೆ ತಪ್ಪೇನು ಇಲ್ಲ.
ನ್ಯೂಸ್ 18 ಕನ್ನಡದಲ್ಲಿ ಭಾರೀ ಬದಲಾವಣೆ…!
Date: