ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ
ಬೆಂಗಳೂರು: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ತಾಯಿ ತನ್ನ ನಾಲ್ಕು ವರ್ಷದ ಮಗಳನ್ನು ಬೆಂಕಿ ಹಚ್ಚಿ ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಸಂಜಯನಗರದ ಕೃಷ್ಣಪ್ಪ ಲೇಔಟ್ನಲ್ಲಿ ನಡೆದ ಈ ಘಟನೆಯಲ್ಲಿ ಸೀತಾ (29) ಮತ್ತು ಅವರ ಪುತ್ರಿ ಸೃಷ್ಟಿ (4) ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ ಸುಮಾರು 7.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತಿ-ಪತ್ನಿ ನಡುವೆ ನಡೆದ ಜಗಳವೇ ಈ ಅತಿದಾರುಣ ಕೃತ್ಯಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.






