ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವರ್ಷದ ಬಳಿಕ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನವೀನ್ ಕುಮಾರ್, ಅಮಿತ್ ದಿಗ್ವೇಕರ್ ಸುರೇಶ್ ಎಂಬ ಆರೋಪಿಗಳಿಗೆ ಜಾಮೀನು ನೀಡಿ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಆರೋಪಿಗಳ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದ ಮಂಡಿಸಿದ್ದರು. ಕೋರ್ಟ್ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಇಂದು ಸಂಜೆ ಅಥವಾ ನಾಳೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು 2017, ಸೆಪ್ಟೆಂಬರ್ 05 ರಂದು ಗುಂಡಿಕ್ಕಿ ಹತ್ಯೆಗೀಡಾಗಿದ್ದರು.