ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದರೆಂಬ ಹಾಗೂ ವಿಶೇಷ ಆತಿಥ್ಯ ಸೌಲಭ್ಯ ನೀಡುತ್ತಿದ್ದರೆಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ ಕಾರಾಗೃಹ ಅಧೀಕ್ಷಕ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದ್ದು, ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದ ಎಲ್ಲಾ ಜೈಲುಗಳಲ್ಲಿನ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರ ನೇತೃತ್ವದಲ್ಲಿ ಹೈ-ಪವರ್ ಸಮಿತಿ ರಚಿಸಲಾಗಿದೆ. ಅವರೊಂದಿಗೆ ಐಪಿಎಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ಸಿ.ಬಿ.ರಿಷ್ಯಂತ್ ಹಾಗೂ ಆಯಾ ಜಿಲ್ಲೆಗಳ ಎಸ್‌ಪಿ ಹಾಗೂ ಡಿಸಿಗಳು ಸಮಿತಿಯಲ್ಲಿರಲಿದ್ದಾರೆ.
”ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮಾತ್ರವಲ್ಲದೆ ಬಳ್ಳಾರಿ, ಗುಲ್ಬರ್ಗಾದ ಜೈಲುಗಳಲ್ಲಿಯೂ ಈ ಹಿಂದೆ ಇಂಥಹ ಚಟುವಟಿಕೆಗಳು ನಡೆದಿರುವ ಕುರಿತು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ. ಕಾರಾಗೃಹಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಅಲ್ಲಿರುವ ಕುಂದುಕೊರತೆಗಳ ಕುರಿತು ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡಲು ಸೂಚಿಸಲಾಗಿದೆ” ಎಂದು ಗೃಹ ಸಚಿವರು ತಿಳಿಸಿದ್ದಾರೆ.






