ಪವಿತ್ರ ಗೌಡಗೆ ಮನೆ ಊಟ ಇಲ್ಲ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಕಠಿಣ ನಿರ್ಧಾರ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಪವಿತ್ರ ಗೌಡಗೆ ಮನೆ ಊಟಕ್ಕೆ ಅನುಮತಿ ನೀಡದಿರಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಮನೆ ಊಟಕ್ಕೆ ಅವಕಾಶ ನೀಡಿದರೆ, ಮುಂದೆ ಇತರ ಎಲ್ಲ ವಿಚಾರಣಾಧೀನ ಕೈದಿಗಳು ಸಹ ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡಿದಲ್ಲಿ, ಪ್ರತಿದಿನವೂ ಅದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಒಳಗೆ ತಲುಪಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಮತ್ತು ವ್ಯವಸ್ಥೆ ಅಗತ್ಯವಾಗುತ್ತದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕೈದಿಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರೂ ಮನೆ ಊಟಕ್ಕೆ ಅರ್ಜಿ ಸಲ್ಲಿಸಿದರೆ ನಿರ್ವಹಣೆ ಕಷ್ಟವಾಗಲಿದೆ ಎಂಬುದು ಜೈಲಾಧಿಕಾರಿಗಳ ಆತಂಕವಾಗಿದೆ.
ಈ ಹಿನ್ನೆಲೆ ಪವಿತ್ರ ಗೌಡ ಸೇರಿದಂತೆ ಆರೋಪಿಗಳಿಗೆ ಮನೆ ಊಟ ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾರಾಗೃಹ ಇಲಾಖೆ ನಿರ್ಧರಿಸಿದೆ.
ಈ ಹಿಂದೆ ಜೈಲಿನ ಆಹಾರ ಸಮರ್ಪಕವಾಗಿಲ್ಲ, ಅದರಿಂದ ಅನಾರೋಗ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಪವಿತ್ರ ಗೌಡ ಮನೆ ಊಟಕ್ಕೆ ಮನವಿ ಸಲ್ಲಿಸಿದ್ದರು. ಇದೇ ವೇಳೆ ನಾಗರಾಜು ಮತ್ತು ಲಕ್ಷ್ಮಣ್ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮನವಿಗಳನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಮೂವರಿಗೆ ದಿನಕ್ಕೆ ಒಂದು ಬಾರಿ ಮನೆ ಊಟ ನೀಡಲು ಅವಕಾಶ ನೀಡಿತ್ತು.
ಆದರೆ ಇದೀಗ ಜೈಲಿನ ಆಡಳಿತಾತ್ಮಕ ಸಮಸ್ಯೆಗಳು ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ಗಮನದಲ್ಲಿಟ್ಟುಕೊಂಡು, ಮನೆ ಊಟಕ್ಕೆ ಅವಕಾಶ ನೀಡದಿರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.






