ಪಹಲ್ಗಾಮ್ ದಾಳಿ ಎಫೆಕ್ಟ್: ಕರ್ನಾಟಕದಲ್ಲಿದ್ದ ನಾಲ್ವರು ಪಾಕ್ ಪ್ರಜೆಗಳು ಗಡಿಪಾರು!
ಬೆಂಗಳೂರು:- ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿ ಪ್ರಕರಣವನ್ನು ವಿಶ್ವದೆಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಅದರಂತೆ ಪಾಕ್ ಮೇಲೆ ಕೇಂದ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಅದರಂತೆ ಕರ್ನಾಟಕದಲ್ಲಿ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ದೀರ್ಘಾವಧಿ ವೀಸಾ ಹೊಂದಿರುವವರ ಗಡಿಪಾರಿಗೆ ಕೇಂದ್ರ ಸೂಚಿಸದ ಕಾರಣ ದೀರ್ಘಾವಧಿ ವೀಸಾ ಹೊಂದಿರುವ 91 ಮಂದಿ ಪಾಕ್ ಪ್ರಜೆಗಳು ಇನ್ನೂ ಕರ್ನಾಟಕದಲ್ಲೇ ಇದ್ದಾರೆ.
ವಿವಿಧ ಜಿಲ್ಲೆಗಳಲ್ಲಿ 91 ಮಂದಿ ವಾಸವಾಗಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. 5 ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರವು ವಿನಾಯಿತಿ ನೀಡಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಭಟ್ಕಳದಲ್ಲಿ 14 ಹಾಗೂ ಕಾರವಾರದಲ್ಲಿ ಒಬ್ಬರು ಸೇರಿ ಒಟ್ಟಾರೆ 15 ಮಂದಿ ವಾಸವಾಗಿದ್ದಾರೆ. ಈ ಪೈಕಿ 12 ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ.