ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಭಾರತ ನೆಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. 5 ವರ್ಷಗಳ ಬಳಿಕ ಭಾರತದಲ್ಲಿ ಟಿ ಟ್ವೆಂಟಿ ವಿಶ್ವಕಪ್ ನಡೆಯಲಿದ್ದು, ಕಳೆದ ಬಾರಿ 2016ರಲ್ಲಿ ಭಾರತದಲ್ಲಿ ನಡೆದಿದ್ದ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವೆಸ್ಟ್ ಇಂಡೀಸ್ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಈ ವರ್ಷ ಮತ್ತೊಮ್ಮೆ ಭಾರತದ ನೆಲದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ. ಈ ಚರ್ಚೆಗೆ ಇದೀಗ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ಕೂಡ ಸೇರಿಕೊಂಡಿದ್ದು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲಿದೆ ಎಂದಿದ್ದಾರೆ.
‘ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಪ್ರಮುಖ ತಂಡಗಳ ಪೈಕಿ ನಾನು ಭಾರತ ತಂಡ ವಿಜಯ ಸಾಧಿಸಲಿದೆ ಎಂದು ಆಯ್ಕೆ ಮಾಡುತ್ತೇನೆ. ಟೀಮ್ ಇಂಡಿಯಾ ಆಟಗಾರರು ಯಾವುದೇ ಭಯವಿಲ್ಲದೆ ತಮ್ಮದೇ ಶೈಲಿಯ ಟಿ ಟ್ವೆಂಟಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲಿದೆ’ ಎಂದು ವಾಸಿಂ ಅಕ್ರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪಾಕಿಸ್ತಾನ ತಂಡದಲ್ಲಿ ಸಾಲುಸಾಲು ಸಮಸ್ಯೆಗಳಿವೆ ಅವುಗಳನ್ನೆಲ್ಲ ಬಗೆಹರಿಸಿಕೊಳ್ಳಬೇಕು, ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸಿಕೊಂಡರೆ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ಪ್ರಯತ್ನವನ್ನು ಮಾಡಬಹುದು ಎಂದು ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.