ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಸಂಸ್ಕಾರ ಮಾಡಲಾಯಿತು.
ಕುಟುಂಬಸ್ಥರು, ಸರ್ಕಾರದ ನಿರ್ಧಾರದಂತೆ ಅಭಿಮಾನಿಗಳಿಗೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ನೀಡಿರಲಿಲ್ಲ. ಹಾಲು-ತಪ್ಪು ಕಾರ್ಯದ ಬಳಿಕ ಸಮಾಧಿ ದರ್ಶನಕ್ಕೆ ಅವಕಾಶ ನೀಡುವುದಾಗಿ ಸೋದರ ಶಿವರಾಜ್ ಕುಮಾರ್ ತಿಳಿಸಿದ್ದರು.
ಇಂದು ಬೆಳಗ್ಗೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಹಾಲು-ತುಪ್ಪ ಕಾರ್ಯವನ್ನು ನೆರವೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಅಭಿಮಾನಿಗಳ ಭೇಟಿಗೆ ಅವಕಾಶ ನೀಡಲಾಗಿದೆ.
ನಾಳೆಯಿಂದ ಸಾರ್ವಜನಿಕರ ಸಮಾಧಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜೊತೆಗೆ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರೋ ಸಾಧ್ಯತೆ ಇರುವುದರಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಇರಲಿದೆ. ಈಗಾಗಲೇ 500 ಕ್ಕೂ ಅಧಿಕ ಪೊಲೀಸರ ಬ್ಯಾರಿಕೇಡ್ ಗಳನ್ನು ಹಾಕಿ ಅಭಿಮಾನಿಗಳು ಸಾಲಾಗಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಹಲವು ಗಣ್ಯರು, ಪರಭಾಷಾ ನಟರು ಪುನೀತ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಇಂದು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರು ಅಪ್ಪು ಕುಟುಂಬ ಹಾಗೂ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.