ಪೂರ್ಣಚಂದ್ರ ತೇಜಸ್ವಿ ಜೊತೆ ನಾನು ಮೀನು ಹಿಡಿದಿದ್ದೆ: ಸಿದ್ದರಾಮಯ್ಯ

0
44

ಸಾಹಿತ್ಯಾಸಕ್ತಿ ಇರುವ ಯಾವ ಕನ್ನಡಿಗರಿಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಗೊತ್ತಿಲ್ಲ ಹೇಳಿ? ಕೃಷಿಕ, ಸಾಹಿತಿ, ಚಿಂತಕ, ವಿಜ್ಞಾನಿ ಎಲ್ಲವೂ ಆಗಿದ್ದ ತೇಜಸ್ವಿ ಅವರಿದ್ದರೆ ಸೆಪ್ಟಂಬರ್ 8ಕ್ಕೆ 80 ವರ್ಷಗಳನ್ನು ಪೂರೈಸುತ್ತಿದ್ದರು. ಬೆಂಗಳೂರಿನಲ್ಲಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಕಳೆದ ಕೌತುಕದ ಕ್ಷಣಗಳನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.

“ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ‌ ನಡುವೆ ಆತ್ಮೀಯತೆ ಬೆಳೆಯಿತು” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

 

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ’ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.

‘ತೇಜಸ್ವಿ ಅವರು ಹಲವು ಬಾರಿ ತಮ್ಮ ತೋಟದ ಮನೆಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ’ ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು. ತೇಜಸ್ವಿ ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here