ಉಡುಪಿ/ಹರಿದ್ವಾರ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟು, ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆ ಮಾಡಿದ್ದ ತಪೋವನಿ ಮಾತಾಜಿ ಸುಭದ್ರಾ ಗುರುವಾರ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮೂಲತಃ ಉಡುಪಿಯ ಪಂದುಬೆಟ್ಟಿನವರಾಗಿದ್ದು, ಎಳವೆಯಲ್ಲಿಯೇ ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. ಕಳೆದ ಸುಮಾರು 60 ವರ್ಷಗಳ ಹಿಂದೆ ಹಿಮಾಲಯ ಸೇರಿ, ಪ್ರತಿಕೂಲ ವಾತಾವರಣದಲ್ಲೂ ನಿರಂತರ 9 ವರ್ಷ ಕಾಲ ತಪಸ್ಸನ್ನಾಚರಿಸಿದ್ದರು. ಅವರ ಆ ಸಾಧನೆಯಿಂದಲೇ ಹಿಮಾಲಯ ಪ್ರದೇಶದಲ್ಲಿ ತಪೋವನಿ ಮಾ ಎಂದೇ ಪ್ರಸಿದ್ಧರಾಗಿದ್ದರು.
ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳು, ಯಾತ್ರಿಗಳಿಗೆ ಊಟೋಪಚಾರ, ಆರೋಗ್ಯ ಸೇವೆ ನಡೆಸುತ್ತಿದ್ದರು. ಅನಾರೋಗ್ಯಕ್ಕೊಳಗಾದ ಬಳಿಕ ಹರಿದ್ವಾರದ ಆಚಾರ್ಯ ಬಾಲಕೃಷ್ಣ ವಿಶೇಷ ಮುತುವರ್ಜಿಯಲ್ಲಿ ಸ್ಥಳೀಯ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ಆಧ್ಯಾತ್ಮ ಸಾಧನೆ ಕುರಿತು ಹಿಂದಿಯಲ್ಲಿ ಪುಸ್ತಕವೊಂದು ಪ್ರಕಟವಾಗಿದೆ. ಅದರ ಕನ್ನಡ ಅನುವಾದವನ್ನು ಪ್ರೊ. ಭಾಸ್ಕರ ಮಯ್ಯ ಮಾಡಿದ್ದು, ಅದನ್ನು ಈಚೆಗೆ ಹರಿದ್ವಾರ ಭೇಟಿ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಆಚಾರ್ಯ ಬಾಲಕೃಷ್ಣ ಅವರು ಮಾತಾಜಿ ಸಮ್ಮುಖದಲ್ಲಿ ಅನಾವರಣಗೊಳಿಸಿದ್ದರು. ಅದಕ್ಕಾಗಿ ವಾಸುದೇವ ಭಟ್ ಪೆರಂಪಳ್ಳಿ ಶ್ರಮಿಸಿದ್ದರು.
ಕೃಷಿ ಕಾಯಿದೆಗಳ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆ ವಿಚಾರವಾಗಿ ನಾವು ತಂಡದ ಸಭೆಯ ವೇಳೆ ಸಣ್ಣದಾಗಿ ಚರ್ಚಿಸಿದ್ದೆವು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಫೆಬ್ರವರಿ 5ರಂದು ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕೊಹ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ‘ಈ ವಿಚಾರವನ್ನು ನಾವು ತಂಡದ ಸಭೆಯಲ್ಲಿ ಸಣ್ಣದಾಗಿ ಚರ್ಚಿಸಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ಹೇಳಿಕೊಂಡಿದ್ದಾರೆ,’ ಎಂದಿದ್ದಾರೆ. ಈ ಬಗ್ಗೆ ಕೊಹ್ಲಿ ಹೆಚ್ಚಿನ ಮಾಹಿತಿ ನೀಡಿಲ್ಲ.
ಅಮೆರಿಕನ್ ಪಾಪ್ ಗಾಯಕಿ, ನಟಿ ರಿಹಾನ ಅವರು ಭಾರತದಲ್ಲಿನ ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್, ಕನ್ನಡಿಗ ಅನಿಲ್ ಕುಂಬ್ಳೆ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೈನಾ ನೆಹ್ವಾಲ್ ಸೇರಿ ಅನೇಕರು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆದಿದ್ದವು.
ರಿಹಾನ್ನಾಗೆ ತಿರುಗೇಟು ನೀಡಿ ಟ್ವೀಟ್ ಮಾಡಿದ್ದವರಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟ್ವೀಟ್ ಸಂಪೂರ್ಣವಾಗಿ ರೈತ ಪರ ಅಥವಾ ವಿರೋಧ ಅನ್ನಿಸುವ ಬದಲು ಕೊಂಚ ತಟಸ್ಥ ರೀತಿಯಲ್ಲಿದ್ದಂತಿತ್ತು. ಉಳಿದಂತೆ ಸಚಿನ್, ಕುಂಬ್ಳೆ, ರೈನಾ ಮೊದಲಾದವರು ರೈತ ಪರ ವಾದಿಗಳ ಕೋಪಕ್ಕೆ ಗುರಿಯಾಗಿದ್ದರು.