ಮಂಗಳೂರು : ಮನುಷ್ಯರು ಬೀದಿಯಲ್ಲಿ ಬಿದ್ದಿದ್ದರೂ ಎತ್ತುವವರಿಲ್ಲ. ಅಂತಹದ್ರಲ್ಲಿ ಬೀದಿ ನಾಯಿಯ ಮೇಲೆ ಅದೆಂತಾ ಪ್ರೀತಿತೋರಿದ್ದಾರೆ ಗೊತ್ತಾ ನಮ್ಮ ಮಂಗಳೂರಿನ ಕದ್ರಿಪೊಲೀಸರು.
ಕದ್ರಿ ಠಾಣೆಯ ಪೊಲೀಸರು ಬೀದಿ ನಾಯಿಯ ಅಂತ್ಯಸಂಸ್ಕಾರ ಮಾಡಿ ಕಣ್ಣೀರಿಟ್ಟಿದ್ದಾರೆ.
ಕದ್ರಿ ಠಾಣೆಯಲ್ಲಿದ್ದ ಶ್ವಾನವೊಂದು ವಯೋಸಹಜ ವೃದ್ಧಾಪ್ಯದಿಂದಾಗಿಸಾವನ್ನಪ್ಪಿದೆ. ಪೊಲೀಸರು ಇದಕ್ಕೆ ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಇದು ಪೊಲೀಸ್ ನಾಯಿಯಲ್ಲ. ಅಪರಾಧ ಪ್ರಕರಣಕ್ಕೆ ಪೊಲೀಸರಿಗೆ ಯಾವುದೇ ಸುಳಿವನ್ನೂ ಕೂಡ ಇದು ನೀಡಿಲ್ಲ. ಆದರೆ ಕದ್ರಿ ಠಾಣೆಯ ಪೊಲೀಸರಿಗೆ ಇದು ಅಚ್ಚುಮೆಚ್ಚಾಗಿತ್ತು. ಎಲ್ಲರನ್ನೂ ಕಂಡು ಬಾಲ ಅಲ್ಲಾಡಿಸುತ್ತಾ ಪ್ರೀತಿ ತೋರಿಸುತ್ತಿದ್ದ ಈ ನಾಯಿಯನ್ನು ಪೊಲೀಸರು ಕೂಡ ಪ್ರೀತಿಯಿಂದಲೇ ಕಾಣುತ್ತಿದ್ದರು.
ಈ ಹೆಣ್ಣು ನಾಯಿಗೆ ಹೆಸರಿಟ್ಟಿರಲಿಲ್ಲ. ಕಳೆದ 10 ವರ್ಷಗಳಿಂದ ಠಾಣೆ ಬಳಿಯೇ ಇತ್ತು. ಹುಟ್ಟುವಾಗಲೇ ಅಂಗವೈಕಲ್ಯ ಹೊಂದಿದ್ದ ಈ ನಾಯಿ ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿತ್ತು. ಚೇತರಿಸಿಕೊಳ್ಳದೆ ಶುಕ್ರವಾರ ಮೃತಪಟ್ಟಿದೆ.
ನಾಯಿಯನ್ನು ಪೊಲೀಸರು ಠಾಣೆಯ ಹಿಂಭಾಗದಲ್ಲೇ ಮಣ್ಣು ನಾಡಿದ್ದಾರೆ. `ನಮ್ಮ ಮನೆಯ ನಾಯಿಯಂತೆಯೇ ನಾವು ಅದನ್ನು ಕಾಣುತ್ತಿದ್ದೆವು. ಅದು ಠಾಣೆಯ ಪರಿಸರದಲ್ಲೇ ನಿತ್ಯ ವಾಸಿಸುತ್ತಿತ್ತು. ಠಾಣೆಯ ಒಳಭಾಗಕ್ಕೂ ಬಂದು ಬಾಲ ಅಲ್ಲಾಡಿಸುತ್ತಾ ಎಲ್ಲರನ್ನೂ ಪರಿಚಯಿಸಿಕೊಂಡಿತ್ತು’ ಪೊಲೀಸರು ಹೇಳಿದ್ದಾರೆ.
ಕೇವಲ ಪೊಲೀಸರಷ್ಟೇ ಅಲ್ಲದೇ ಪರಿಸರದ ಹಿರಿಯ ನಾಗರಿಕರಾಗಿರುವ ಸಿಂಥಿಯಾ ಪಿಂಟೋ ಅವರು ಸಹ ತಿಂಡಿ ತಂದು ಹಾಕುತ್ತಿದ್ದರು. ಎಲ್ಲರಿಗೂ ಈ ನಾಯಿ ಪ್ರೀತಿಪಾತ್ರವಾಗಿತ್ತು. ಠಾಣೆಯಲ್ಲಿ ಇನ್ನೂ ಎರಡು ನಾಯಿಗಳಿವೆ. ಪೊಲೀಸರು ಇವುಗಳನ್ನೂ ಮನೆನಾಯಿಯಂತೆ ಸಾಕುತ್ತಿದ್ದಾರೆ.