ಬೆಂಗಳೂರು: ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಹೌದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಹಿ ನಕಲುಗೊಳಿಸಿ ತಮ್ಮ ಜಮೀನು ಕಬಳಿಸಿರುವುದಾಗಿ ಆರೋಪಿಸಿ ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಿದ್ದಾರೆ. ಯಲಹಂಕದ ಶ್ಯಾಂಪುರದಲ್ಲಿರುವ ತಮ್ಮ 8 ಎಕರೆ 16 ಗುಂಟೆ ಜಾಗವನ್ನು ಕಬಳಿಸಲಾಗಿದೆ ಎಂದು ಆರೋಪಿಸಿರುವ ಸಂಸದರು ಯಲಹಂಕ ನ್ಯೂಟೌನ್ ಠಾಣೆಗೆ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲೇನಿದೆ:
1990ರ ಮಾರ್ಚ್‌ನಲ್ಲಿ ತುಳಸಿ ರಾಮೇಗೌಡ ಎಂಬುವವರಿಂದ ತಾವು 8 ಎಕರೆ 16 ಗುಂಟೆ ಜಮೀನು ಖರೀದಿಸಿದ್ದು, ಬಿಬಿಎಂಪಿಯಿಂದ ಡಿ.ಆರ್.ಸಿ ಪಡೆಯುವ ಉದ್ದೇಶಕ್ಕೆ ಪ್ರಕಾಶ್ ಎನ್ನುವವರಿಗೆ ಅನ್ ರಿಜಿಸ್ಟರ್ಡ್ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ನೀಡಿರುತ್ತೇನೆ. ಬಳಿಕ ತಮ್ಮ ರಾಜಕೀಯ ಕಾರ್ಯಗಳ ನಿಮಿತ್ತ ಈ ಜಮೀನಿನ ಬಗ್ಗೆ ಅಷ್ಟೊಂದು ಗಮನಹರಿಸಿರಲಿಲ್ಲ. ಈ ನಡುವೆ ಜಮೀನಿನ ಬಗ್ಗೆ ಬಿಬಿಎಂಪಿ TDR (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಪ್ರಕಟಿಸಿತ್ತು. ಆಗ ಪ್ರಕಾಶ್ ಅವರ ಬಗ್ಗೆ ವಿಚಾರಿಸಿದಾಗ ಅವರು ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿರುವುದು ತಿಳಿದು ಬಂದಿತ್ತು.
ಬಳಿಕ ಜಮೀನಿನ ದಾಖಲೆ ತೆಗಿಸಿದಾಗ, ಜಮೀನು ಹಾರ್ದಿಕ್ ಗೌಡ ಎನ್ನುವವರ ಹೆಸರಿಗೆ ಜಿಪಿಎ ಅಗಿರುವುದು ತಿಳಿದು ಬಂದಿದೆ. ತಾವೇ ಜಿಪಿಎ ಕೊಟ್ಟಿರುವಂತೆ ನಕಲಿ ದಾಖಲೆ ಸೃಷ್ಟಿಸಿ, ಗಂಗಾ ನಗರದ ರಿಜಿಸ್ಟರ್ ಕಚೇರಿಯಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುವಂತೆ ದಾಖಲೆ ಸೃಷ್ಠಿಸಲಾಗಿದೆ.ಇವುಗಳನ್ನು ಬಳಸಿಕೊಂಡು ಹಾರ್ದಿಕ್ ಗೌಡ, ಗಾಂಧಿನಗರ ಸಬ್ ರಿಜಿಸ್ಟರ್ ಕಚೇರಿಯಿಂದ ತನ್ನ ಹೆಸರಿಗೆ DRC (ಡೆವಲಪ್ಮೆಂಟ್ ರೈಟ್ಸ್ ಸರ್ಟಿಫಿಕೇಟ್) ಪಡೆದಿದ್ದಾನೆ.
ಬಳಿಕ ಆದಿ ಭಾಸ್ಕರ್, ಕರ್ನಾಟಕ ಬ್ಯಾಂಕ್ ಇಂದಿರಾನಗರಕ್ಕೆ TDR ಮಾಡಿಕೊಡಲಾಗಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂಸದರ ದೂರಿನ ಮೇರೆಗೆ ಹಾರ್ದಿಕ್ ಗೌಡ, ಆದಿ ಭಾಸ್ಕರ್ ಹಾಗೂ ಕರ್ನಾಟಕ ಬ್ಯಾಂಕ್ ಇಂದಿರಾನಗರ ಶಾಖೆಯ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಠಾಣಾ ಮೆಟ್ಟಿಲೇರಿದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ..!
Date: