ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ 76ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. ಇದು ಗತವೈಭವದಲ್ಲಿ ಮೈಮರೆಯದೆ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುವ ಕಾಲ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಸಂವಿಧಾನದ ಮೂರು ಮುಖ್ಯ ಆಧಾರ ಸ್ಥಂಭಗಳು ಭದ್ರವಾಗಿದ್ದು ಆರೋಗ್ಯಕರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಿಧಾನದ ಪಾಲನೆಯಾಗುತ್ತಿದೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಅರ್ಥ.”
“ಕಟುವಾದ ಸತ್ಯ ಏನೆಂದರೆ ಸರ್ವಾಧಿಕಾರದ ದಂಡದಡಿ ನಮ್ಮ ಕಾರ್ಯಾಂಗ ಕರ್ತವ್ಯಭ್ರಷ್ಟಗೊಳ್ಳುತ್ತಿದೆ, ಶಾಸಕಾಂಗವನ್ನು ಖರೀದಿಸಲಾಗುತ್ತಿದೆ ಮತ್ತು ನ್ಯಾಯಾಂಗಕ್ಕೆ ಬೆದರಿಕೆ ಒಡ್ಡಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಆಧಾರ ಸ್ಥಂಭಗಳು ದುರ್ಬಲಗೊಂಡು ಶಕ್ತಿಹೀನವಾದಾಗ ಸಂವಿಧಾನವೇ ಅಪ್ರಸ್ತುತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆಗಳಿವೆ.”
“ಇಂತಹದ್ದೊಂದು ಅಪಾಯದ ಸ್ಥಿತಿಯಲ್ಲಿ ಭಾರತ ಇಂದು ನಿಂತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ. ಜಾತಿ, ಮತ, ಪಂಥ, ಪ್ರದೇಶದ ಭೇದಗಳನ್ನು ಮರೆತು ಇಡೀ ದೇಶ ಒಂದಾಗಿ ಹೊರಗಿನ ಶತ್ರುಗಳನ್ನು ಹೊಡೆದೋಡಿಸಲು ಹೇಗೆ ಸ್ವಾತಂತ್ರ್ಯಹೋರಾಟ ನಡೆಸಲಾಯಿತೋ, ಅಂತಹದ್ದೇ ಒಂದು ಹೋರಾಟವನ್ನು ದೇಶದೊಳಗಿನ ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ನಡೆಸಬೇಕಾಗಿದೆ ಎಂದರು.