ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ
ಬೆಂಗಳೂರು:
ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಆರೋಪದಡಿ ಬೆಂಗಳೂರು ಸಿಸಿಬಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿತ ಮಹಿಳೆ ಸ್ವಾಮೀಜಿಗೆ ಒಂದು ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದು, ಈಗಾಗಲೇ 4.5 ಲಕ್ಷ ರೂಪಾಯಿ ವಸೂಲಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದಾಗ, ಸ್ವಾಮೀಜಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ಪೂರ್ತಿಯನ್ನು ಬಂಧಿಸಿದ್ದಾರೆ.
ಐದು ತಿಂಗಳ ಹಿಂದೆ ಪರಿಚಯ, ನಂತರ ಹಣದ ಬೇಡಿಕೆ
ಸುಮಾರು ಐದು ತಿಂಗಳ ಹಿಂದೆ ಸ್ಪೂರ್ತಿ ಸ್ವಾಮೀಜಿಗೆ ಕರೆ ಮಾಡಿ, ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಳು. ನಂತರ ಕ್ರಮೇಣ ಸ್ವಾಮೀಜಿಯ ಬಳಿ ಹಣಕ್ಕೆ ಬೇಡಿಕೆ ಇಡಲು ಆರಂಭಿಸಿದ್ದಳು.
ಹಣ ನೀಡದಿದ್ದರೆ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ. ಈ ಮೂಲಕ ಸ್ವಾಮೀಜಿಯನ್ನು ಹೆದರಿಸಿ 4.5 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸ್ವಾಮೀಜಿಯಿಂದ 4.5 ಲಕ್ಷ ರೂಪಾಯಿ ಪಡೆದಿದ್ದರೂ, ಬಳಿಕ ಮತ್ತೆ ಒಂದು ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ತನ್ನ ಸಹಚರರೊಂದಿಗೆ ಸೇರಿ ಬೆದರಿಕೆ ಹಾಕಿದ ಆರೋಪವೂ ಸ್ಪೂರ್ತಿ ಮೇಲೆ ಇದೆ.
ಮತ್ತೆ ಬ್ಲ್ಯಾಕ್ ಮೇಲ್ ಆರೋಪ: ಹಳೆಯ ಪ್ರಕರಣದ ಪುನರಾವರ್ತನೆ?
ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಕೂಡ ಹನಿಟ್ರ್ಯಾಪ್ ಆರೋಪದ ಪ್ರಕರಣ ದಾಖಲಾಗಿತ್ತು. ಆಗ ಬೆಂಗಳೂರು ಸಿಸಿಬಿ ಪೊಲೀಸರು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಆ ಪ್ರಕರಣದಲ್ಲಿ ಆರೋಪಿಗಳು 6 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮತ್ತೊಮ್ಮೆ ಯುವತಿ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿ ಬಂದಿರುವುದು ಚರ್ಚೆಗೆ ಕಾರಣವಾಗಿದೆ.
ಫೋಟೋ–ವಿಡಿಯೋ ಪ್ರಸಾರಕ್ಕೆ ತಡೆಯಾಜ್ಞೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ತಮ್ಮಗೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆಯಾಜ್ಞೆ ಪಡೆದಿದ್ದಾರೆ.
ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಆರೋಪಿಗೆ ಸಂಬಂಧಿಸಿದ ಸಹಚರರ ಪಾತ್ರದ ಬಗ್ಗೆ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.






