ತುಂಬು ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಹೆಸರನ್ನು ಮರೆತು ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ. ಭದ್ರತಾ ಪಾಲುದಾರಿಕೆ ವಿಚಾರವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೆಸರನ್ನೇ ಜೋ ಬೈಡನ್ ಮರೆತಿದ್ದರು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಹೊಸ ಭದ್ರತಾ ಪಾಲುದಾರಿಕೆಗಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಯುಕೆ ಸೇರಿ ‘AUKUS’ ಎನ್ನುವ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಜೋ ಬೈಡನ್ ಅವರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಹೆಸರು ಮರೆತು ಮುಜುಗರಕ್ಕೆ ಒಳಗಾದರು. ಗೋಷ್ಠಿ ಸಮಯದಲ್ಲಿ ಧನ್ಯವಾದಗಳು ಬೋರಿಸ್ ಎಂದು ಹೇಳುತ್ತಾ ಯುಕೆ ಪ್ರಧಾನಿಯಡೆಗೆ ನೋಡಿದರು, ಬಳಿಕ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಕಡೆಗೆ ತಿರುಗಿದಾಗ ಬೈಡನ್ ಅವರ ಹೆಸರನ್ನು ಮರೆತಂತೆ ತೋರುತ್ತಿತ್ತು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ 24 ರಂದು ಮೊದಲ ಬಾರಿಗೆ ಆಯೋಜಿಸಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ಸೋಮವಾರ ಪ್ರಕಟಿಸಿದೆ.
ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯಸಭೆಯ 76 ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ‘ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.