ಪ್ರವಾಸೋದ್ಯಕ್ಕೆ ಪೆಟ್ಟು ನೀಡಲು ಭಯೋತ್ಪಾದಕ ಚಟುವಟಿಕೆ ನಡೆಸಲಾಗಿದೆ: ಪ್ರಹ್ಲಾದ್ ಜೋಶಿ
ನವದೆಹಲಿ: ಪ್ರವಾಸೋದ್ಯಕ್ಕೆ ಪೆಟ್ಟು ನೀಡಲು ಭಯೋತ್ಪಾದಕ ಚಟುವಟಿಕೆ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಭಾರತದ ಮುಕುಟದಂತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಬಹು ದೊಡ್ಡ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದೆ.
ಸ್ವಿಡ್ಜರ್ಲ್ಯಾಂಡ್ಗಿಂತಲೂ ಸುಂದರವಾಗಿದೆ ಎಂಬ ಭಾವನೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದರು. ಇದನ್ನು ಸಹಿಸದೇ ಅಲ್ಲಿ ಅಶಾಂತಿ ಸೃಷ್ಟಿಸಿ, ಪ್ರವಾಸೋದ್ಯಕ್ಕೆ ಪೆಟ್ಟು ನೀಡಲು ಭಯೋತ್ಪಾದಕ ಚಟುವಟಿಕೆ ನಡೆಸಲಾಗಿದೆ ಎಂದು ಹೇಳಿದರು.
ಕಳೆದ ಐದಾರು ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಅಭೂತಪೂರ್ವವಾಗಿ ಬೆಳೆದಿದೆ. ಇಲ್ಲಿನವರಿಗೆ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಬಂದಿದೆ.
ಅಲ್ಲದೇ, ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಹ ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದಿವೆ. ಜೊತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸೇರಿ ಎಲ್ಲವೂ ಭಯೋತ್ಪಾದಕರ ಕಣ್ಣು ಕುಕ್ಕಿವೆ. ಅದರ ಪರಿಣಾಮವೇ ಭಯೋತ್ಪಾದನಾ ಕೃತ್ಯ ಎಂದು ಹೇಳಿದರು.