ಅವರಿಬ್ಬರು ಮದುವೆಯಾಗಿ 5 ವರ್ಷವಾಗಿತ್ತು. 3 ವರ್ಷ ತನ್ನೊಡನೆ ಸಂಸಾರ ನಡೆಸಿದ ಪತ್ನಿ ಎರಡು ವರ್ಷದ ಹಿಂದೆ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಕೂಲಿ ಮಾಡಿ ಮಕ್ಕಳಿಬ್ಬರನ್ನು ಸಾಕಲಾಗದೆ ಆ ಪತಿರಾಯ ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಕಾರ್ಕಳ ತಾಲೂಕಿನ ಬೈಲೂರು ಬಳಿಯ ನೀರೆಯಲ್ಲಿ.
ಅಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಆನಂದ ಎಂಬ ವ್ಯಕ್ತಿ ತನ್ನಿಬ್ಬರು ಮಕ್ಕಳನ್ನು ಹಣಕ್ಕಾಗಿ ಮಾರಾಟಕ್ಕೆ ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಧಾವಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿ, ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಒಪ್ಪಿಸಿದ್ದಾರೆ.
ಆನಂದನಿಗೆ ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಕಳೆದ 2 ವರ್ಷಗಳ ಹಿಂದೆ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂದು ತಿಳಿದುಬಂದಿದೆ. 4.5 ವರ್ಷದ ಗಂಡು, 3.5ವರ್ಷದ ಹೆಣ್ಣುಮಗು ಹಾಗೂ ವೃದ್ಧ ತಾಯಿಯೊಂದಿಗೆ ಆನಂದ್ ಸರಕಾರಿ ಜಾಗದಲ್ಲಿ ಪುಟ್ಟದಾದ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದ. ಮದ್ಯವ್ಯಸನದಿಂದ ಮಕ್ಕಳನ್ನು ಸಾಕಲಾಗದೆ ಮಕ್ಕಳನ್ನು ಮಾರು ನಿರ್ಧಾರಕ್ಕೆ ಬಂದಿದ್ದಾನೆ ಎಂಬುದು ಆರೋಪ.
ಈತನ ಕಷ್ಟವರಿತ ಕೆಲ ಮಂದಿ ಮಕ್ಕಳನ್ನು ನಮಗೆ ಕೊಡು ನಿನಗೆ ಹಣ ಕೊಡುತ್ತೇನೆ ಎಂದು ಪುಸಲಾಯಿಸಿದ್ದಾರೆ. ಕೂಲಿ ಕೆಲಸದ ಜತೆಗೆ ಮಕ್ಕಳನ್ನು ಸಾಕುವ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಆನಂದ ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಸುದ್ದಿ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ನೀರೆ ಪಂಚಾಯತ್ ಪಿಡಿಓ ಅಂಕಿತಾ ನಾಯಕ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾನು ಕೂಲಿಕಾರ್ಮಿಕನಾಗಿದ್ದು ಮಕ್ಕಳನ್ನು ಸಾಕಲು ಕಷ್ಟವಾದರೆ ನಮಗೆ ಕೊಡಿ ಎಂದು ಹಲವರು ಕೇಳಿದ್ದಾರೆ. ಆದರೆ ತಾನು ಮಕ್ಕಳನ್ನು ಯಾರಿಗೂ ಕೊಡುವುದಿಲ್ಲವೆಂದು ಆನಂದ್ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆ. ಆದರೆ, ಮಕ್ಕಳ ಸುರಕ್ಷತೆ ಬಗ್ಗೆ ಯೋಚಿಸಿದ ಅಧಿಕಾರಿಗಳು ದತ್ತು ಸಂಸ್ಥೆಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.