ಮಂಗಳೂರು: ಕರಾವಳಿಯಲ್ಲಿ ಮೃತ ಯುವತಿಯ ಮದುವೆಗೆ, ಮೃತ ಯುವಕ ಬೇಕು ಅಂತ ಜಾಹೀರಾತು ನೀಡಿದ್ದು, ಸದ್ಯ ಈ ಜಾಹೀರಾತು ಎಲ್ಲೇಡೆ ವೈರಲ್ ಆಗಿದೆ. ಹೌದು. 30 ವರ್ಷಗಳ ಹಿಂದೆ ತೀರಿಹೋದ ಹೆಣ್ಣುಮಗುವಿಗೆ ಅದೇ ಜಾತಿಯ, ಕುಲ, ಗೋತ್ರ ಸರಿಹೊಂದುವ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದಾರೆ. ಹೀಗೊಂದು ಜಾಹೀರಾತು ಕರಾವಳಿಯಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದು ಕೆಲವರಿಗೆ ಹಾಸ್ಯವಾಗಿ ಕಂಡರೂ ಜಾಹೀರಾತು ನೀಡಿದ ಮನೆಯವರಿಗೆ ಹಾಗೂ ತುಳುವರಿಗೆ ಭಾವನಾತ್ಮಕ ವಿಷಯ. ತುಳುವರಿಗೆ ಗತಿಸಿ ಹೋದವರ ಬಗ್ಗೆಯೂ ಎಷ್ಟೊಂದು ಭಾವನಾತ್ಮಕ ನಂಟು ಇದೆ ಎನ್ನುದನ್ನು ಇದು ತೋರಿಸುತ್ತೆ. ಇದಕ್ಕಾಗಿಯೇ ಕರಾವಳಿಯಲ್ಲಿ ಗತಿಸಿದ ಹೆಣ್ಣಿನ ಮನೆಯವರು 30 ವರ್ಷದ ಪ್ರಾಯದ ಗತಿಸಿದ ಗಂಡು ಬೇಕು ಅಂತ ಕರಾವಳಿಯ ಪ್ರಸಿದ್ಧ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.
ಮದುವೆಯಾಗದೇ ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಅಂತ ತುಳುವರ ಬಲವಾದ ನಂಬಿಕೆ. ಅದೃಶ್ಯ ರೂಪದಲ್ಲಿ ಕುಟುಂಬದೊಂದಿಗೆ ಸದಾಕಾಲ ಜೀವಿಸುತ್ತಿರುವ ಅವಿವಾಹಿತರಿಗೆ ಮದುವೆಯ ಸಂಸ್ಕಾರಕ್ಕಾಗಿ ಪ್ರೇತಮದುವೆ ಮಾಡಿಸಲಾಗುತ್ತದೆ. ಮದುವೆಯಾಗದೆ ಸತ್ತವರು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ಮದುವೆಯ ಬಗ್ಗೆಯೂ ಕುಟುಂಬಸ್ಥರು ಚಿಂತನೆ ಮಾಡುತ್ತಾರೆ. ಕೆಲವೊಂದು ಕಡೆಗಳಲ್ಲಿ ಗತಿಸಿದವರೇ ತಮ್ಮ ಮದುವೆಯ ಬಗ್ಗೆ ಕುಟುಂಬದವರಿಗೆ ತೊಂದರೆ ನೀಡಿ ನೆನಪಿಸೋದು ಇದೆ ಎನ್ನುವ ನಂಬಿಕೆ ಇದೆ.
ಮದುವೆಯೆಂದ್ರೆ ಇದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ಮದುವೆಯ ರೀತಿಯಲ್ಲಿಯೇ ಹೆಣ್ಣು – ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ. ಧಾರೆಯ ಬಳಿಕ ಸೇರಿದವರಿಗೆ ಮದುವೆಯ ಊಟವನ್ನು ಬಡಿಸಲಾಗುತ್ತದೆ. ಪ್ರೇತ ಮದುವೆ ಆಷಾಢ ತಿಂಗಳ ರಾತ್ರಿ ವೇಳೆ ನಡೆಯುವುದು ಸಂಪ್ರದಾಯ. ಆಧುನಿಕ ಕಾಲಘಟ್ಟದಲ್ಲೂ ಇಂತಹ ನಂಬಿಕೆಗಳನ್ನು ಜೀವಂತ ಇರೋದು ವಿಶೇಷ. ಪ್ರೇತ ವಿವಾಹ ಮಾಡಿದ್ರೆ ಕುಟುಂಬಕ್ಕೆ ಸಮಸ್ಯೆ ಇಲ್ಲ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ.
ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ: ಜಾಹೀರಾತು ವೈರಲ್ – ಏನಿದು ಪ್ರೇತ ಮದುವೆ?
Date:






