ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ: ಶಾಸಕ ಭರತ್ ರೆಡ್ಡಿ ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರವಾಗಿ ಶಾಸಕ ಭರತ್ ರೆಡ್ಡಿ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಭರತ್ ರೆಡ್ಡಿ ಸೇರಿ 22 ಜನರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಗೆ ಅತಿಕ್ರಮ ಪ್ರವೇಶ, ಜಾತಿನಿಂದನೆ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಶಾಸಕ ಭರತ್ ರೆಡ್ಡಿ ಅವರ ಆಪ್ತರಾದ ಸತೀಶ್ ರೆಡ್ಡಿ, ಚಾನಾಳ ಶೇಖರ್, ಲೋಕೇಶ್ ಅವಂಬಾವಿ, ಗಂಗಾಧರ ಸೇರಿದಂತೆ 22 ಜನರು ಆರೋಪಿಗಳಾಗಿದ್ದಾರೆ.
ಈ ಪ್ರಕರಣದಲ್ಲಿ ಮೊದಲು ನಿನ್ನೆ ಶಾಸಕ ಭರತ್ ರೆಡ್ಡಿ ಬೆಂಬಲಿಗ ಚಾನಾಳ ಶೇಖರ್ ಅವರು ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಜನಾರ್ದನ ರೆಡ್ಡಿ ಅವರ ಬೆಂಬಲಿಗ ಹಾಗೂ ಮನೆಗೆಲಸದ ವ್ಯಕ್ತಿ ನಾಗರಾಜ್ ಅವರು ಪ್ರತಿದೂರು ದಾಖಲಿಸಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ನಾಗರಾಜ್ ಇಬ್ಬರೂ ಪ್ರತ್ಯೇಕವಾಗಿ ದೂರು ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್‌ಪಿ ನೇತೃತ್ವದಲ್ಲಿ ಪೊಲೀಸರು ಜನಾರ್ದನ ರೆಡ್ಡಿ ಅವರ ಮನೆಗೆ ತೆರಳಿ ದೂರು ಸ್ವೀಕರಿಸಿದ್ದಾರೆ.
ಜನಾರ್ದನ ರೆಡ್ಡಿ ನೀಡಿದ ದೂರಿನಲ್ಲಿ ಶಾಸಕ ಭರತ್ ರೆಡ್ಡಿ 5ನೇ ಆರೋಪಿಯಾಗಿದ್ದರೆ, ನಾಗರಾಜ್ ನೀಡಿದ ದೂರಿನಲ್ಲಿ 3ನೇ ಆರೋಪಿಯಾಗಿದ್ದಾರೆ. ಈ ಸಂಬಂಧ ಬಳ್ಳಾರಿ ನಗರದ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






