ಬಳ್ಳಾರಿ ಫೈರಿಂಗ್ ಪ್ರಕರಣ: ಭರತ್ ರೆಡ್ಡಿ ಬಂಧನಕ್ಕೆ ಆರ್. ಅಶೋಕ್ ಆಗ್ರಹ
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಶಾಸಕ ಭರತ್ ರೆಡ್ಡಿಯೇ ಹೊಣೆಗಾರರು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ಗೂಂಡಾಗಳು ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಮೇಲೆ ಗುಂಡಿನ ದಾಳಿ ನಡೆಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಕುಸಿತವನ್ನು ತೋರಿಸುತ್ತದೆ ಎಂದರು.
ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಘಟನೆ ಆ ಭರವಸೆಗಳೆಲ್ಲವೂ ಖಾಲಿ ಮಾತುಗಳಾಗಿವೆ. ಆಂಧ್ರದ ರಕ್ತಚರಿತ್ರೆ ಈಗ ಬಳ್ಳಾರಿಗೆ ಬಂದಿದೆ. ಬಳ್ಳಾರಿ ರಿಪಬ್ಲಿಕ್ ಎಂದಿದ್ದ ಸಿದ್ದರಾಮಯ್ಯ ಆಡಳಿತದಲ್ಲಿ ಇದೀಗ ಕಾಂಗ್ರೆಸ್ ರಿಪಬ್ಲಿಕ್ ನಿರ್ಮಾಣವಾಗಿದೆಯಾ ಎಂದು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ನಡೆದ ಸಾವಿಗೆ ನೇರ ಕಾರಣ ಭರತ್ ರೆಡ್ಡಿ. ಅವರನ್ನು ಹಾಗೂ ಸತೀಶ್ ರೆಡ್ಡಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಪ್ರಕರಣಕ್ಕೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು. ಬಳ್ಳಾರಿಯಲ್ಲಿ ಬಿಜೆಪಿ ಬಲಗೊಳ್ಳುತ್ತಿರುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳಲಾಗುತ್ತಿಲ್ಲ. ರೆಡ್ಡಿ–ರಾಮುಲು ಒಂದಾಗಿರುವುದರಿಂದ ಜನಾರ್ದನ ರೆಡ್ಡಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿದೆ. ಅದು ತಪ್ಪಿ ಕಾರ್ಯಕರ್ತನಿಗೆ ತಗುಲಿ ಸಾವು ಸಂಭವಿಸಿದೆ ಎಂದು ಆರ್. ಅಶೋಕ್ ಆರೋಪಿಸಿದರು.






