ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿ ಕೆಲಸ ಮಾಡುವುದಕ್ಕೆ ಇಚ್ಛಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕಾಗಿ ರಾಜ್ಯಾದ್ಯಂತ ಸುತ್ತಿದ್ದೇವೆ. ವರಿಷ್ಠರು ಹೆಚ್ಚಿನ ಜವಾಬ್ದಾರಿಯನ್ನು ನೀಡಿದರೆ ನಿರ್ವಹಿಸುವುದಕ್ಕೆ ನಾನು ಸಿದ್ಧನಿದ್ದೇನೆ. ಆದರೆ ಸಚಿವನಾಗಲು ಬಯಸುವುದಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಶೆಟ್ಟರ್ ಉತ್ತರಿಸಿದ್ದಾರೆ.
“ಬಿ ಎಸ್ ಯಡಿಯೂರಪ್ಪ ತಮಗಿಂತ ಹಿರಿಯ ನಾಯಕರು ಎಂಬ ಕಾರಣಕ್ಕಾಗಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾನು ಸಚಿವರಾಗಿ ಸಂಪುಟದಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ಆದರೆ ಈ ಹಂತದಲ್ಲಿ ನಾನು ಸಂಪುಟ ಸೇರಲು ಇಚ್ಛಿಸುವುದಿಲ್ಲ. ಅದರ ಬದಲಿಗೆ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಿದ್ಧನಿದ್ದೇನೆ,” ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.