ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಅಧಿಕಾರಿಗೆ ಜೆಡಿಎಸ್ ನಿಯೋಗ ದೂರು ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಮತ ನೀಡದೇ ಇದ್ರೆ ಗ್ಯಾರಂಟಿ ಯೋಜನೆಗಳು ರದ್ದು ಎಂದಿದ್ದ ಬಾಲಕೃಷ್ಣ ವಿರುದ್ಧ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇನ್ನು ನಿಖಿಲ್ ಗೆ ಶಾಸಕ ಸ್ವರೂಪ್ ಪ್ರಕಾಶ್, ಎಂ. ಟಿ ಮಂಜು, ಹರೀಶ್ ಗೌಡ ಸಾಥ್ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಈಗಾಗಲೇ ಜಾರಿ ಮಾಡಿರುವ ಐದು ಗ್ಯಾರೆಂಟಿಗಳು ರದ್ದಾಗುತ್ತವೆ ಎಂದು ಚುನಾವಣೆಗೆ ಮೊದಲೇ ಜನತೆಗೆ ಬ್ಲ್ಯಾಕ್ ಮೇಲ್ ಮಾಡಿರುವ ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.
ಈ ವೇಳೆ ಶಾಸಕ ಬಾಲಕೃಷ್ಣ ಶಾಸಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ವಿಧಾನಸಭಾ ಚುನಾವಣಾ ಪೂರ್ವ ದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ರು, ಜನತೆ ಕೂಡಾ ಆಶೀರ್ವಾದ ಮಾಡಿದ್ರು. ಆದ್ರೆ, ಮಾಗಡಿ ಶಾಸಕರು ಕೊಟ್ಟ ಹೇಳಿಕೆಯನ್ನು ಎಲ್ರೂ ಗಮನಿಸಿದ್ದೇವೆ. ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ಕೊಟ್ಟಿದ್ದಾರೆ. ಬ್ಲಾಕ್ ಮೇಲ್ ಮಾಡೋ ರೀತಿ ಮಾತಾಡಿದ್ದಾರೆ, ಈ ಬಗ್ಗೆ ಇವತ್ತು ದೂರು ಕೊಟ್ಟಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಡಿಕೆ ಸುರೇಶ್ ಹೇಳಿಕೆ ಬಗ್ಗೆ ಮಾತನಾಡಿದ ನಿಖಿಲ್, ಚುನಾಯಿತ ಪ್ರತಿನಿಧಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಈ ರೀತಿಯ ಬಾಲಿಶ ಹೇಳಿಕೆ ಕೊಡುವುದು ಖಂಡನೀಯ. ಈ ರೀತಿಯ ಹೇಳಿಕೆಗಳನ್ನು ಯಾವುದೇ ಜನ ಪ್ರತಿನಿಧಿಗಳು ಕೊಡಬಾರದು. ಇನ್ನು ಚೆಲುವರಾಯಸ್ವಾಮಿ ಹೇಳಿಕೆಗಳಿಗೆ ಜನ ಉತ್ತರ ಕೊಡಲಿದ್ದಾರೆ. ಅವರ ಹೇಳಿಕೆ ಗಳಿಗೆ ಈಗ ಉತ್ತರ ಕೊಡಲ್ಲ ಎಂದು ಹೇಳಿದ್ರು.