ತೆಲುಗು ಸ್ಟಾರ್ ನಂದಮುರಿ ಬಾಲಕೃಷ್ಣ ಹುಟ್ಟುಹಬ್ಬದ ಬೆನ್ನಲ್ಲೇ ಅವರ ಮುಂದಿನ ಸಿನಿಮಾ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಲಕೃಷ್ಣ ಮುಂದಿನ ಚಿತ್ರಕ್ಕೆ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿದ್ದು, 61ನೇ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅಂದಹಾಗೆ ಇದು ಬಾಲಕೃಷ್ಣ ನಟನೆಯ 107ನೇ ಸಿನಿಮಾವಾಗಿದೆ.
ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು ಸದ್ಯ ಚಿತ್ರತಂಡ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ನಾಯಕಿಯಾಗಿ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಗೋಪಿಚಂದ್ ಜೊತೆ ಕ್ರ್ಯಾಕ್ ಚಿತ್ರದಲ್ಲಿ ನಟಿಸಿದ್ದ ವರಲಕ್ಷ್ಮಿಗೆ ದೊಡ್ಡ ಬ್ರೇಕ್ ನೀಡಿತ್ತು. ಇದರ ಬೆನ್ನಲ್ಲೇ ಮತ್ತೆ ಗೋಪಿಚಂದ್ ಜೊತೆ ಕೆಲಸ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಬಾಲಯ್ಯ ಜೊತೆ ನಟಿಸಲು ವರಲಕ್ಷ್ಮಿ ಉತ್ಸುಕರಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಬಹುನಿರೀಕ್ಷೆಯ ಚಿತ್ರಕ್ಕೆ ಟಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿಸ್ ಬಂಡವಾಳ ಹೂಡುತ್ತಿದೆ. ಬಾಲಕೃಷ್ಣ 107ನೇ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯದಲ್ಲೇ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವ ಬಗ್ಗೆ ನಟಿ ವರಲಕ್ಷ್ಮಿ ಇನ್ನೂ ಅಧಿಕೃತ ಮಾಹಿತಿ ಬಹಿರಂಗಪಡಿಲ್ಲ. ವರಲಕ್ಷ್ಮಿ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ನಂದಮುರಿ ಬಾಲಕೃಷ್ಣ ಸದ್ಯ ಅಖಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೊಯಪಟಿ ಶ್ರೀನು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟ್ ಬಿಡುಗಡೆಮಾಡಲಾಗಿತ್ತು. ಥ್ರಿಲ್ಲರ್ ಸಿನಿಮಾ ಇದಾಗಿದ್ದು ಪ್ರಮುಖ ಪಾತ್ರದಲ್ಲಿ ಪ್ರಗ್ಯಾ ಜೈಸ್ವಾಲ್ ನಟಿಸುತ್ತಿದ್ದಾರೆ.