ಬಿಜೆಪಿಯಿಂದ ಉಚ್ಚಾಟನೆ: ಹೊಸ ಪಕ್ಷ ಕಟ್ಟುತ್ತಾರಾ ಶಾಸಕ ಯತ್ನಾಳ್!?
ಬೆಂಗಳೂರು:- ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ 6 ವರ್ಷಗಳ ಕಾಲ ಬಿಜೆಪಿ ಶಾಸಕ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.
ಇದೀಗ ಉಚ್ಛಾಟನೆಗೊಂಡ ಬಳಿಕವೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅಲ್ಲದೇ ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರೋದಿದೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್‌ವೈ ಕುಟುಂಬವನ್ನು ನಾನು ಹೊರಗೆ ಇಡೋವರೆಗೂ ಬಿಡೋದಿಲ್ಲ ಅಂತ ಶಪಥ ಮಾಡಿದ್ದಾರೆ.
ಮೂರು ನನಗೆ ಲಕ್ಕಿ, 3ನೇ ಬಾರಿ ಉಚ್ಚಾಟನೆ ಮಾಡಿರೋದು, ಮುಂದೆ ಏನಾಗುತ್ತೆ ನೋಡಿ, ಇದಕ್ಕೆ ಕಾರಣಕರ್ತರಾದವರು ನಾಶ ಆಗ್ತಾರೆ. ಯಾರ ಮನವರಿಕೆಯೂ ನಾನು ಮಾಡಲ್ಲ. ಜನಮೆಚ್ಚಿದ ನಾಯಕ ಯಾರೂ ಇಲ್ಲ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸೋ ಯೋಗ್ಯತೆ ಇಲ್ಲ. ಆದ್ರೆ ನಾನು ಬಾಡಿಗೆ ಜನ ತಂದಿಲ್ಲ. ನಿನ್ನೆ ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.