ದುಬೈ : ಐಸಿಸಿ ( ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಮತ್ತು ಬಿಸಿಸಿಐ ( ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಡುವೆ ಆಗಾಗ ಏನಾದರೂ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಈಗ ಟೂರ್ನಿ ಆಯೋಜನೆ ವಿಷಯದಲ್ಲಿ ಐಸಿಸಿಯ ವಿರುದ್ಧ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಕಿಡಿಕಾರುತ್ತಿದ್ದು, ಐಸಿಸಿ ಮತ್ತು ಬಿಸಿಸಿಐ ನಡುವೆ ಮತ್ತೊಮ್ಮೆ ತಿಕ್ಕಾಟ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.
ಬಿಸಿಸಿಐ ವಿರೋಧದ ನಡುವೆಯೂ ಮುಂಬರುವ ಭವಿಷ್ಯದ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ವರ್ಷಕ್ಕೊಂದು ವಿಶ್ವಕಪ್ ಆಯೋಜಿಸಲು ಐಸಿಸಿ ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ.
2023-2028ರ ಅವಧಿಯಲ್ಲಿ ವರ್ಷಕ್ಕೊಂದು ವರ್ಲ್ಡ್ ಕಪ್ (ಪುರುಷ ಹಾಗೂ ಮಹಿಳಾ) ಆಯೋಜಿಸಲು ಐಸಿಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
2023 -2028ರ ಅವಧಿಯಲ್ಲಿ ಒಟ್ಟು ಎರಡು 50 ಓವರ್ ವಿಶ್ವಕಪ್, 4 ಟಿ20 ವಿಶ್ವಕಪ್ ಹಾಗೂ 2 ಹೊಸ ಟೂರ್ನಿಗಳನ್ನು ನಡೆಸಲು ಐಸಿಸಿ ಯೋಜನೆ ರೂಪಿಸಿದ್ದು, ಈ ಹೊಸ ಸರಣಿಕೂಡ 50 ಓವರ್ ಮಾದರಿಯ ಟೂರ್ನಿಯೇ ಆಗಿರಲಿದೆ… ಚಾಂಪಿಯನ್ಸ್ ಟ್ರೋಫಿ ರೀತಿಯಲ್ಲಿ 6 ತಂಡಗಳ ನಡುವೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ಬಿಸಿಸಿಐ ವಿರೋಧಿಸಿದೆ.
ಐಸಿಸಿ ವರ್ಷಕ್ಕೊಂದು ವರ್ಲ್ಡ್ ಕಪ್ ನಡೆಸಿದರೆ ಬಿಸಿಸಿಐಗೆ ಪ್ರಸಾರ ಹಕ್ಕು ನಷ್ಟವಾಗಲಿದೆ. ಉದಾಹರಣೆಗೆ, ಸ್ಟಾರ್ ಸ್ಪೋಟ್ಸ್‌ರ್ ಇಲ್ಲವೇ ಸೋನಿ ವಾಹಿನಿ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕು (ಟೀವಿ, ರೇಡಿಯೋ, ಡಿಜಿಟಲ್) ಪಡೆಯಲು .100 ಬಂಡವಾಳ ಹೂಡಲು ಇಚ್ಛಿಸಿವೆ ಎಂದುಕೊಂಡರೆ, ಇಲ್ಲಿ ಐಸಿಸಿ ಹಾಗೂ ಬಿಸಿಸಿಐ ನಡುವೆ ಸ್ಪರ್ಧೆ ಏರ್ಪಡಲಿದೆ. ಬಿಸಿಸಿಐನ ಪ್ರತಿಷ್ಠಿತ ಐಪಿಎಲ್ ಸರಣಿ ಮತ್ತು ದ್ವಿಪಕ್ಷೀಯ ಸರಣಿಗಳ ಹಕ್ಕಿನ ಬದಲು ವಾಹಿನಿಗಳು ಅಂತಾರಾಷ್ಟ್ರೀಯ ಟೂರ್ನಿಗಳ ಪ್ರಸಾರದ ಹಕ್ಕನ್ನು ಹೊಂದಲು ಮುಂದಾಗುತ್ತವೆ. ಆದ್ದರಿಂದ ಬಿಸಿಸಿಐ ಸಾಲು ಸಾಲು ವಿಶ್ವಕಪ್ ಗೆ ವಿರೋಧ ವ್ಯಕ್ತಪಡಿಸಿದೆ.
ಇನ್ನು ಐಸಿಸಿಗೆ ಬಿಸಿಸಿಐಯೇ ಪ್ರಮುಖ ಹಾಗೂ ಪ್ರಬಲ ಆದಾಯದ ಮೂಲವಾಗಿದ್ದರೂ ಬಿಸಿಸಿಐಗೆ ಅಧಿಕ ಹಣ ಸಂದಾಯವಾಗುತ್ತಿದೆ.
ಐಸಿಸಿಗೆ ಬರುವ ಜಾಹೀರಾತು, ಪ್ರಸಾರ ಹಕ್ಕು, ಪ್ರಯೋಜಕತ್ವ ಮೊತ್ತದ ಶೇ. ಶೇ 75-80ರಷ್ಟುಹಣ ಭಾರತದಿಂದಲೇ ಸಿಗಲಿದೆ. ಹೀಗಿರುವಾಗ ಸಹಜವಾಗಿಯೇ ಬಿಸಿಸಿಐ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದೆ ಇದನ್ನು ತಪ್ಪಿಸುವು ಉದ್ದೇಶದಿಂದಲೇ ಐಸಿಸಿ ವರ್ಷಕ್ಕೊಂದು ವಿಶ್ವಕಪ್ ನಡೆಸಲು ತೀರ್ಮಾನಿಸಿದ್ದು, ಆ ಮೂಲಕ ಬಿಸಿಸಿಐ ಆದಾಯಕ್ಕೆ ಕತ್ತರಿ ಹಾಕಲು ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದ್ದು, ಆದರೆ ಐಸಿಸಿ ಬಿಸಿಸಿಐ ಒತ್ತಾಯಕ್ಕೆ ಮಣಿಯುವ ಸಾಧ್ಯತೆಯೇ ಹೆಚ್ಚಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.