ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್ ಹಾಗೂ ಕನ್ನಡಿಗ ಬಿಎಸ್ ಚಂದ್ರಶೇಖರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
75ರ ಪ್ರಾಯದ ಕರ್ನಾಟಕದ ಮಾಜಿ ಲೆಗ್ ಸ್ಪಿನ್ನರ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಬಿ.ಎಸ್ ಚಂದ್ರಶೇಖರ್ ಅವರು ಬಹುಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಶುಭಹಾರೈಸಿದ್ದಾರೆ.
1945ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ಭಗವತ್ ಸುಬ್ರಮಣ್ಯ ಚಂದ್ರಶೇಖರ್, 1964ರ ಜನವರಿ 21 ರಂದು ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 58 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಚಂದ್ರಶೇಖರ್, 242 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
1976ರ ಫೆಬ್ರುವರಿ 22ರಲ್ಲಿ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಆಡಿದ ಒಂದೇ ಒಂದು ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ನಂತರ, ಏಕದಿನ ಕ್ರಿಕೆಟ್‌ನಲ್ಲಿ ಬಿಎಸ್ ಚಂದ್ರಶೇಖರ್ ಮುಂದುವರಿಯಲಿಲ್ಲ.
ಇನ್ನು ಕರ್ನಾಟಕದ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಿಎಸ್‌ಸಿ, 246 ಪಂದ್ಯಗಳಿಂದ 1063 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ‘ಎ’ 7 ಪಂದ್ಯಗಳಿಂದ 8 ವಿಕೆಟ್ ಕಿತ್ತಿದ್ದಾರೆ.
“ಭಾರತೀಯ ಕ್ರಿಕೆಟ್‌ನ ಸ್ಪಿನ್ ದಂತಕತೆ ಬಿಎಸ್ ಚಂದ್ರಶೇಖರ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ಅವರು ಗುಣಮುಖರಾಗಲಿ. ಕಠಿಣ ಸಂದರ್ಭಗಳಲ್ಲಿ ಅವರು ಕುಟುಂಬದ ಜತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದ್ದಾರೆ,” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಬಿ.ಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲೆ
Date: