ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!
ಬೆಂಗಳೂರು: ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೃಂದಾ (4) ಹಾಗೂ ಭುವನ್ (1) ಕೊಲೆಗೀಡಾದ ಮಕ್ಕಳು. ವಿಜಯಲಕ್ಷ್ಮಿ ರಾಯಚೂರು ಮೂಲದ ರಮೇಶ್ ಎಂಬಾತನನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಮದುವೆಯ ನಂತರ ದಂಪತಿ ಬೆಂಗಳೂರು ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಲಾಗಿತ್ತು. ಪತಿ ರಮೇಶ್ ಗರುಡ ಮಾಲ್ ನಲ್ಲಿ ಉದ್ಯೋಗಿಯಾಗಿದ್ದ. ದಂಪತಿಗೆ ಒಬ್ಬ ಗಂಡು ಹಾಗೂ ಒಂದು ಹೆಣ್ಣು ಮಗುವಿತ್ತು. ಈ ನಡುವೆ ತಾನು ಮತ್ತೊಂದು ಮದುವೆಯಾಗಿದ್ದೇನೆ ಎನ್ನುತ್ತಿದ್ದ ರಮೇಶ್, ವಿಚ್ಛೇದನ ನೀಡುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಎಂದು ಆಕೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದೇ ವಿಚಾರವಾಗಿ ಪದೇ ಪದೇ ಕುಟುಂಬದಲ್ಲಿ ಜಗಳವಾಗುತ್ತಿತ್ತು. ವಿಜಯಲಕ್ಷ್ಮಿ ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಇದರಿಂದಲೇ ನೊಂದು ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.