ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ತತ್ತರಿಸಿದ್ದಾರೆ. ಇದೇ ವೇಳೆ ಜನರ ಮೇಲೆ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಬರೆ ಹಾಕಿದೆ.

ಮಂಗಳವಾರ ಮಧ್ಯರಾತ್ರಿಯಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ- 75ರ ಟೋಲ್ ದರವನ್ನು ಹೆಚ್ಚಳ ಮಾಡಿರುವುದು ವಾಹನ ಸವಾರರ ಸಿಟ್ಟಿಗೆ ಕಾರಣವಾಗಿದೆ. ಬೆಂಗಳೂರು ನಗರ ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಇರುವ ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ವೇ ಪ್ರೈವೇಟ್ ಲಿಮಿಟೆಡ್ ಟೋಲ್‌ನಲ್ಲಿ, ಲಘು ವಾಹನಗಳನ್ನು ಹೊರತುಪಡಿಸಿ ಭಾರೀ ಗಾತ್ರದ ವಾಹನಗಳ ಟೋಲ್ ದರ ಮಂಗಳವಾರ ಮಧ್ಯ ರಾತ್ರಿಯಿಂದಲೇ ಹೆಚ್ಚಳವಾಗಿದೆ.
ಲಾರಿ, ಬಸ್‌ಗಳಿಗೆ ಸೇರಿದಂತೆ ಹಳೆಯ ದರ ಏಕಮುಖ ಸಂಚಾರ 160 ರೂ. ಮತ್ತು ದ್ವಿಮುಖ ಸಂಚಾರಕ್ಕೆ 240 ರೂಪಾಯಿ ಇತ್ತು. ಈಗಿನ ಹೊಸದರದಲ್ಲಿ ಏಕಮುಖ ಸಂಚಾರಕ್ಕೆ 160 ರೂ., ದ್ವಿಮುಖ ಸಂಚಾರಕ್ಕೆ 245 ರೂ ಇದೆ. ದ್ವಿಮುಖ ಸಂಚಾರದಲ್ಲಿ 5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಳೆಯ ದರ ಏಕಮುಖ ಸಂಚಾರಕ್ಕೆ 255 ರೂ., ದ್ವಿಮುಖ ಸಂಚಾರಕ್ಕೆ ಹಳೆ ದರ 385 ರೂ. ಇತ್ತು. ಈಗ ಹೊಸ ದರದಲ್ಲಿ ಏಕಮುಖ ಸಂಚಾರಕ್ಕೆ 260 ರೂ. ಆಗಿದ್ದು 5 ರೂಪಾಯಿ ಹೆಚ್ಚಳವಾದರೆ, ದ್ವಿಮುಖ ಸಂಚಾರದಲ್ಲಿ 390 ರೂಪಾಯಿ ಇದ್ದು, ಇಲ್ಲಿಯೂ ಸಹ 5 ರೂಪಾಯಿ ಹೆಚ್ಚಳವಾಗಿದೆ ಎಂದು ದೇವಿಹಳ್ಳಿ ಟೋಲ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.