ಸಿಲಿಕಾನ್ ಸಿಟಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಫಿನ್‌ಟೆಕ್ ಉದ್ಯೋಗಿಗಳನ್ನ ಆಕರ್ಷಿಸಲು ಬಂಪರ್ ಆಫರ್ ಒಂದನ್ನ ನೀಡಿದೆ. ಅದೇನಂದ್ರೆ ವಾರಕ್ಕೆ ಮೂರೇ ದಿನ ಕೆಲಸ!. ಹೌದು ಇದು ಕೇಳಲು ಆಶ್ಚರ್ಯವೆನಿಸಿದ್ರು ನಿಜ. ಭಾರತೀಯ ಐಟಿ ಕಂಪನಿಗಳಲ್ಲಿ ಪ್ರತಿಭೆಗಳ ಕೊರತೆ ಹೆಚ್ಚಾದ ನಡುವೆ ನುರಿತ ಹಾಗೂ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಆಯ್ಕೆಗೆ ಈ ವಿಭಿನ್ನ ರೀತಿಯ ತಂತ್ರಕ್ಕೆ ಫಿನ್‌ಟೆಕ್ ಕಂಪನಿ ಮುಂದಾಗಿದೆ.
ಫಿನ್‌ಟೆಕ್ ಕಂಪನಿ ಹೊಸ ನೇಮಕಾತಿಯಲ್ಲಿ ವಾರದಲ್ಲಿ ಮೂರು ದಿನಗಳ ಕೆಲಸ ಮಾಡುವವರಿಗೆ ಮಾರುಕಟ್ಟೆ ದರದೊಂದಿಗೆ ಶೇಕಡಾ 80ರಷ್ಟು ವೇತನ ನೀಡುವುದಾಗಿ ತಿಳಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. “ಇದು ಒಂದು ಗೆಲುವು-ಗೆಲುವಿನ ವಿಧಾನವಾಗಿದ್ದು, ಕಾರ್ಮಿಕರಿಗೆ ಇತರ ಆಸಕ್ತಿಗಳನ್ನು ಅಥವಾ ಇತರ ಗಿಗ್‌ಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸ್ಥಿರವಾದ ವೇತನ ನೀಡುವುದರ ಜೊತೆಗೆ ಲಾಭವನ್ನು ಪಡೆಯುತ್ತಿದೆ” ಎಂದು ಕಂಪನಿಯ ಸಂಸ್ಥಾಪಕ ರಾಜನ್ ಬಜಾಜ್ ಹೇಳಿದರು.
ಮಾತನ್ನು ಮುಂದುವರಿಸಿದ ರಾಜನ್ ಬಜಾಜ್ ”ಇದು ಕೆಲಸದ ಭವಿಷ್ಯವಾಗಿದೆ. ಜನರು ಕೆಲಸಕ್ಕೆ ತಮ್ಮನ್ನು ತಾವು ಕಟ್ಟಿಹಾಕಿಕೊಳ್ಳಲು ಬಯಸುವುದಿಲ್ಲ” ಎಂದು ಬ್ಲೂಮ್‌ಬರ್ಗ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ.