ಬೆಂಗಳೂರಿನ ‘ಚಪಾತಿ ಮನೆ’ ಬಗ್ಗೆ ನೀವು ಓದ್ದೇ ಇದ್ರೆ ಹೇಗೆ?
ಬೆಂಗಳೂರಿನ ಮಹಾಲಕ್ಷ್ಮಿಪುರ ಬಡಾವಣೆಯ ಸರಸ್ವತಿಪುರದಲ್ಲಿರುವ ‘ಚಪಾತಿ ಮನೆ’ಯ ಮಾಲೀಕರರಾದ ಎಚ್.ವಿ. ಲಕ್ಷ್ಮಣರಾವ್ ಹಾಗೂ ಲಕ್ಷ್ಮೀದೇವಿ ದಂಪತಿ. ಹಲವು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಕೆಲಸದ ಒತ್ತಡದಿಂದ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಮಯ ಕಳೆದು ಮನೆಗೆ ಬಂದು ಹೊತ್ತಿಗೆ ಬೇಕಾದ ರುಚಿಕರವಾದ ಆಹಾರ ತಯಾರಿಸುವಲ್ಲಿ ಸೋತು ಸುಣ್ಣವಾಗುವ ಡಯಟ್ ಕಾನ್ಶಿಯಸ್ ಆಹಾರ ಪ್ರಿಯ ಬೆಂಗಳೂರಿಗರ ಹಸಿವು ತಣಿಸುವಲ್ಲಿ ಈ ಮನೆಯ ಪಾತ್ರ ಮಹತ್ತರವಾದದ್ದಾಗಿದೆ.
ಈ ಮನೆಯಲ್ಲಿ ಉದ್ದುವ ಚಪಾತಿ ಮಣೆಯ ಸದ್ದು, ಚಪಾತಿಗೆ ಸಿಕ್ಕ ಬೆಂಕಿಯ ಕಾವಿನ ಘಮ, ಮನೆಯ ಆವರಣದಲ್ಲಿ ಕಟ್ಟಿಟ್ಟ ಒಬ್ಬಟ್ಟು, ನಿಪ್ಪಟ್ಟು ರಾಶಿ ರಾಶಿ ಆಹಾ! ಭೋಜನ ಪ್ರಿಯರಿಗಂತೂ ಹಬ್ಬವೇ ಸರಿ. 13 ವರ್ಷಗಳ ಹಿಂದೆ ಶಿವಮೊಗ್ಗದ ಮಾಸ್ತಿಕಟ್ಟೆಯಿಂದ ಬೆಂಗಳೂರಿಗೆ ಬಂದ ಎಚ್.ವಿ. ಲಕ್ಷ್ಮಣರಾವ್ ಹಾಗೂ ಲಕ್ಷ್ಮೀದೇವಿ ದಂಪತಿ ಎಸ್.ಎಲ್.ವಿ. ಫುಡ್ಸ್ ಚಪಾತಿ ಮನೆ ರೂವಾರಿಗಳು. ಬೆಂಗಳೂರಿಗೆ ಬಂದ ಹೊಸತರಲ್ಲಿ ದುಡಿಮೆಯ ಅನಿವಾರ್ಯವಿದ್ದ ಅವರು ಸ್ನೇಹಿತರ ಸಲಹೆಯಂತೆ ಚಪಾತಿ ಮಾಡಿ ಮಾರುವ ಕೆಲಸ ಪ್ರಾರಂಭಿಸಿದರು.
ದಿನಕ್ಕೆ 15 ಚಪಾತಿ ಲಟ್ಟಿಸಿಕೊಂಡು ಹತ್ತಾರು ಹೋಟೆಲ್ ಸುತ್ತಿದ್ರು. ಅಂದು ಯಾರೂ ಚಪಾತಿ ಖರೀದಿಸುವ ಮನಸ್ಸು ಮಾಡುತ್ತಿರಲಿಲ್ಲ. ಆದರೂ ಅನಿವಾರ್ಯತೆ ಇದ್ದಿದ್ದರಿಂದ ಈ ದಂಪತಿ ನಿತ್ಯವೂ ಚಪಾತಿ ಮಾಡಿಕೊಂಡು ಹೋಟೆಲ್ ಸುತ್ತುತ್ತಿತ್ತು. ಆದ್ರೀಗ, 500ಕ್ಕೂ ಹೆಚ್ಚು ಹೋಟೆಲ್ನವರಿಂದ ಚಪಾತಿಗೆ ಬೇಡಿಕೆ ಇದೆ. ನಿತ್ಯ ಸುಮಾರು 35 ಹೋಟೆಲ್ಗಳಿಗೆ ಇಲ್ಲಿಂದಲೇ ಚಪಾತಿ, ಪರೋಠಾ ಸರಬರಾಜು ಆಗುತ್ತದೆ. ಇದು ಅಂದು ನಾವು ಪಟ್ಟ ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನುತ್ತಾರೆ ಲಕ್ಷ್ಮಣರಾವ್.
ಚಪಾತಿ ವ್ಯಾಪಾರವನ್ನೇ ಜೀವನ ನಿರ್ವಹಣೆಯ ದಾರಿಯಾಗಿಸಿಕೊಂಡ ಈ ದಂಪತಿ ದಿನವೊಂದಕ್ಕೆ 40 ಸಾವಿರ ಚಪಾತಿ ಮಾಡಿ ಮಾರಾಟ ಮಾಡಿದ್ದೂ ಇದೆ. ಆರಂಭದಲ್ಲಿ ಎದುರಾದ ಜಾಗದ ಸಮಸ್ಯೆ, ಹಣಕಾಸು ತೊಂದರೆ ಎಲ್ಲವನ್ನೂ ದಾಟಿ ಬೆಳೆದ ನಮ್ಮ ‘ಚಪಾತಿ ಮನೆ’ ಇಂದು ಕೇಟರಿಂಗ್, ಕಾಂಡಿಮೆಂಟ್ಸ್ ಮಾರಾಟದಲ್ಲೂ ತೊಡಗಿಕೊಂಡಿದೆ. ಅಲ್ಲದೆ ಪ್ರತಿ ಬಾರಿಯೂ ಹೊಸ ಹೊಸ ತಿಂಡಿಗಳು ಚಪಾತಿ ಮನೆ ಪಟ್ಟಿಗೆ ಸೇರಿ ಸದ್ಯ 100ಕ್ಕೂ ಹೆಚ್ಚು ಬಗೆಯ ತಿಂಡಿಗಳು ಲಭ್ಯವಿವೆ .
ಇಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ದಾವಣಗೆರೆ, ಬಳ್ಳಾರಿಯಿಂದಲೂ ಬಂದಿರುವ ಕೆಲಸಗಾರರು ಇಲ್ಲಿದ್ದು ಅವರಿಗೆ ವಸತಿ ಸೌಲಭ್ಯವನ್ನೂ ಈ ದಂಪತಿಯೇ ಕಲ್ಪಿಸಿಕೊಟ್ಟಿದೆ. ನಿತ್ಯ 10 ರಿಂದ 12 ಸಾವಿರ ಚಪಾತಿಯನ್ನು ತಯಾರಿಸಲಾಗುತ್ತದೆ. ನಿತ್ಯವೂ ಒಂದಿಲ್ಲಾ ಒಂದು ತಿಂಡಿಗೆ ಆರ್ಡರ್ ಬರುತ್ತಲೇ ಇರುತ್ತದೆ. ಚಪಾತಿ ಮನೆಯ ಮೊದಲ ಆಕರ್ಷಣೆ ಸ್ವಚ್ಛತೆ. ಮಹಿಳಾ ಕೆಲಸಗಾರರೇ ಹೆಚ್ಚಿದ್ದು ಎಲ್ಲ ಬಗೆಯ ಅಡುಗೆ ಪರಿಕರಗಳನ್ನು ಶುದ್ಧವಾಗಿ ಇರಿಸಿಕೊಂಡಿದ್ದಾರೆ.
ಈ ಚಪಾತಿ ಮನೆಯಲ್ಲಿ ಮಜಬೂತ್ ಆದ ಬಗೆಬಗೆಯ ಚಪಾತಿ ಅಷ್ಟೇ ಅಲ್ಲ, ಜೋಳದ ರೊಟ್ಟಿ, ಪರೋಟ, ಒತ್ತು ಶಾವಿಗೆ, ನೀರು ದೋಸೆ, ರೈಸ್ಬಾತ್, ಅಕ್ಕಿ, ರಾಗಿ ರೊಟ್ಟಿ, ಇಡ್ಲಿ, ತಟ್ಟೆ ಇಡ್ಲಿ, ಪಲ್ಯಗಳು, ಕಜ್ಜಾಯ, ಸಮೋಸ, ಬಗೆಬಗೆ ಹೋಳಿಗೆ, ಹಾಲ್ಬಾಯಿ, ಕರ್ಜಿಕಾಯಿ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಮದ್ದೂರುವಡೆ, ಬೆಣ್ಣೆ ಮುರುಕು, ಈರುಳ್ಳಿ ಪರೋಟ, ಸಮೋಸ, ಹಪ್ಪಳ, ಸಂಡಿಗೆ, ಚಟ್ನಿಪುಡಿ, ಬಾತ್ ಪುಡಿಗಳು, ಉಪ್ಪಿನಕಾಯಿ ಇತ್ಯಾದಿ.
ಏನೇ ಹೇಳಿ, ಆಹಾರ ಪ್ರಿಯ ಬೆಂಗಳೂರಿಗರ ಹಸಿವು ತಣಿಸುವಲ್ಲಿ ನಿರತರಾಗಿರುವ ‘ಚಪಾತಿ ಮನೆ’ ಯ ದಂಪತಿ ಪಟ್ಟ ಶ್ರಮ, ಈಗಿನ ಯಶಸ್ಸು ಪ್ರತಿಯೊಬ್ಬರಿಗೂ ಸ್ಫೂರ್ತಿ.