ಬೆಂಗಳೂರು: ಪ್ರತಿಷ್ಟಿತ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ: ಸಿಬ್ಬಂದಿಗಳು ಆತಂಕ!
ಬೆಂಗಳೂರು:- ನಗರದ ಪ್ರತಿಷ್ಟಿತ ಐಬಿಸ್ ಹೋಟೆಲ್‌ಗೆ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಸಿಬ್ಬಂದಿಗಳು ಆತಂಕಗೊಂಡಿದ್ದಾರೆ. ಸಂಪಂಗಿರಾಮನಗರದ ಐಬಿಸ್ ಹೋಟೆಲ್‌ಗೆ ಸೋಮವಾರ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಕೆಲ ಕಾಲ ಹೋಟೆಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರ ರಾತ್ರಿ ಹೋಟೆಲ್‌ನ ಇ-ಮೇಲ್ ವಿಳಾಸಕ್ಕೆೆ ಹುಸಿ ಬೆದರಿಕೆ ಸಂದೇಶ ಬಂದಿತ್ತು.
‘ಹೋಟೆಲ್ ಆವರಣದಲ್ಲಿ ಬಾಂಬ್ ಇಟ್ಟಿದ್ದೇವೆ. ಕೆಲ ಗಂಟೆಗಳಲ್ಲೇ ಸ್ಫೋಟವಾಗಲಿದೆ’ ಎಂದು ಬರೆಯಲಾಗಿತ್ತು. ಸಂದೇಶ ಗಮನಿಸಿದ್ದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಸ್ಥಳಕ್ಕೆ ತೆರಳಿದ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೋಟೆಲ್ ಆವರಣದಲ್ಲಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳಾಗಲಿ, ರಾಸಾಯನಿಕ ಪದಾರ್ಥಗಳಾಗಲಿ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ. ಬಳಿಕ ಸಿಬ್ಬಂದಿಗಳು ನಿರಾಳರಾಗಿದ್ದಾರೆ.