ಬೆಂಗಳೂರು ನಗರದಲ್ಲಿ ಸೈಕಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 8 ಕಿ. ಮೀ. ಪ್ರತ್ಯೇಕ ಸೈಕಲ್ ಪಥವನ್ನು ನಗರದಲ್ಲಿ ನಿರ್ಮಾಣ ಮಾಡಲಾಗಿದೆ.
ನಗರದ ಕಬ್ಬನ್ ಪಾರ್ಕ್‌ನಲ್ಲಿ ಪ್ರತ್ಯೇಕ ಸೈಕಲ್ ಪಥವನ್ನು ನಿರ್ಮಾಣ ಮಾಡಲಾಗಿದೆ. ಪಾರ್ಕ್ ಆವರಣದಲ್ಲಿ ಸುಮಾರು 8 ಕಿ. ಮೀ. ಈ ಮಾರ್ಗವಿದ್ದು, ಕೆಲವೇ ದಿನಗಳಲ್ಲಿ ಸೈಕಲ್ ಸವಾರರಿಗೆ ಮುಕ್ತವಾಗಲಿದೆ.
ಪ್ರತ್ಯೇಕ ಸೈಕಲ್ ಪಥ ಮುಕ್ತವಾದ ಬಳಿಕ ಸೈಕಲ್ ಸವಾರರು ಬೇರೆ ಯಾವುದೇ ವಾಹನಗಳ ಭಯವಿಲ್ಲದೇ ಸೈಕಲ್ ಪಥದಲ್ಲಿ ಸಂಚಾರ ನಡೆಸಬಹುದಾಗಿದೆ. ಸೈಕಲ್ ಪಥದ ಪಕ್ಕದಲ್ಲಿಯೇ ಜಾಗಿಂಗ್ ಮಾಡುವವರಿಗೆ ವ್ಯವಸ್ಥೆ ಮಾಡಲಾಗಿದೆ.
ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್ ಓಡಿಸುವಾಗ, ಜಾಗಿಂಗ್ ಮಾಡುವಾಗ ಬೇರೆ ವಾಹನಗಳ ಭಯವಿತ್ತು. ಪಾರ್ಕ್‌ನಲ್ಲಿ ವಾಹನಗಳ ಸಂಚಾರವನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂಬ ಬೇಡಿಕೆಯೂ ಇತ್ತು. ಆದರೆ ಅದಕ್ಕೆ ಸಂಚಾರಿ ಪೊಲೀಸರು ಮತ್ತು ಸರ್ಕಾರ ಒಪ್ಪಿಗೆ ಕೊಡಲಿಲ್ಲ. ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರತ್ಯೇಕವಾದ ಸೈಕಲ್ ಪಥವನ್ನು ನಿರ್ಮಾಣ ಮಾಡಲಾಗಿದೆ.
ಸೈಕಲ್ ಪಥ ಮುಕ್ತವಾದ ಮೇಲೆ ಬೆಳಗ್ಗೆ 8 ರಿಂದ ಸಂಜೆ 7 ಗಂಟೆಯ ತನಕ ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್ ಮೂಲಕ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸೈಕಲ್ ಪಥದಲ್ಲಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಇದರಿಂದಾಗಿ ಸೈಕಲ್ ಸವಾರರು ನಿರ್ಭಯವಾಗಿ ಸೈಕಲ್ ಓಡಿಸಬಹುದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಮಾಡಲಾಗಿದೆ. ಮಕ್ಕಳಿಗಾಗಿಯೇ ಪ್ರತ್ಯೇಕ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ.
ತೋಟಗಾರಿಕಾ ಇಲಾಖೆ ಕಾರ್ಯಕ್ಕೆ ಸೈಕಲ್ ಸವಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಜಾಗಿಂಗ್, ವಾಕಿಂಗ್ ಎಂದು ಹಲವಾರು ಜನರು ಪ್ರತಿದಿನ ಕಬ್ಬನ್ ಪಾರ್ಕ್‌ಗೆ ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ.