ಬೆಳಗಾವಿ, ಅಕ್ಟೋಬರ್ 12; ಬೆಳಗಾವಿ-ತಿರುಪತಿ ವಿಮಾನ ಸೇವೆಯನ್ನು ಪುನಃ ಆರಂಭಿಸಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಸೇವೆಗೆ ಸೋಮವಾರ ಪುನಃ ಚಾಲನೆ ಸಿಕ್ಕಿದೆ.
ಸ್ಟಾರ್ ಏರ್ ಸಂಸ್ಥೆ ವಾರದಲ್ಲಿ ಎರಡು ದಿನ ಬೆಳಗಾವಿ-ತಿರುಪತಿ ನಡುವೆ ವಿಮಾನ ಹಾರಾಟವನ್ನು ನಡೆಸಲಿದೆ. ಬೆಳಗಾವಿಯ ಬಿಜೆಪಿ ಸಂಸದೆ ಮಂಗಲ ಸುರೇಶ್ ಅಂಗಡಿ ವಿಮಾನ ಸೇವೆಗೆ ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು.
ತಿರುಪತಿಯಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ವಿಮಾನ ಬೆಳಗಾವಿಗೆ ಮಧ್ಯಾಹ್ನ 1.20ಕ್ಕೆ ಆಗಮಿಸಲಿದೆ. ಸ್ಟಾರ್ ಏರ್ ಸಂಸ್ಥೆಯ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಈ ವಿಮಾನ ಸೇವೆಯಿಂದ ತಿರುಪತಿ ದೇವಾಲಯಕ್ಕೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿದೆ.
ಸ್ಟಾರ್ ಏರ್ ಸಂಸ್ಥೆ ಮುಂಬೈ, ಸೂರತ್, ಅಹಮದಾಬಾದ್, ಜೋಧಪುರ್, ನಾಸಿಕ್, ಇಂಧೋರ್ ಮತ್ತು ತಿರುಪತಿ ಸೇರಿ ಏಳು ನಗರಗಳಿಗೆ ವಿಮಾನ ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಮತ್ತು ಗೋವಾದ ಗಡಿ ಭಾಗದಲ್ಲಿರುವ ಜನರಿಗೆ ಅನುಕೂಲವಾಗಲಿದೆ.