ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡೇಟಿನಿಂದ ಗಾಯಗೊಂಡು ಉಪ್ಪಾರ ಪೇಟೆ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಒರಿಸ್ಸಾದ ಬಿಸ್ವನಾಥ್ ಜಿಲ್ಲೆಯ ನಿವಾಸಿ ಮನ್ಸೂರ್ ಖಾನ್(23) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹಿಂಭಾಗದ ರಸ್ತೆಯ ಪಕ್ಕದಲ್ಲಿರುವ ಕಟ್ಟಡದ ಬಳಿ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಈ ಆಧಾರದ ಮೇಲೆ ಇನ್‍ಸ್ಪೆಕ್ಟರ್ ರಾಜೇಂದ್ರ ಅವರು ಕಾನ್‍ಸ್ಟೆಬಲ್ ಜಯಚಂದ್ರ ಹಾಗೂ ಇನ್ನಿತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸರನ್ನು ಗಮನಿಸಿದ ಆರೋಪಿ ಮನ್ಸೂರ್ ಖಾನ್ ಏಕಾಏಕಿ ಕಾನ್‍ಸ್ಟೆಬಲ್ ಜಯಚಂದ್ರ ಮೇಲೆ ಡ್ರಾಗರ್‍ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ತಕ್ಷಣ ಇನ್ಸ್‍ಪೆಕ್ಟರ್ ರಾಜೇಂದ್ರ ಅವರು ಆರೋಪಿ ಮನ್ಸೂರ್‍ಗೆ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಇನ್ಸ್‍ಪೆಕ್ಟರ್ ಮಾತಿಗೆ ಕಿವಿಗೊಡದೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ರಾಜೇಂದ್ರ ಅವರು ಹಾರಿಸಿದ ಗುಂಡು ಆರೋಪಿ ಬಲ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ಈ ವೇಳೆ ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮನ್ಸೂರ್‍ಖಾನ್ ಮೇಲೆ ದರೋಡೆ, ಕೊಲೆ ಯತ್ನ ಹಾಗೂ ಹಣಕ್ಕಾಗಿ ಅಪಹರಣ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ. ಈ ಬಗ್ಗೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.