ಡೇವಿಡ್ ಮಿಲ್ಲರ್ ಪ್ರಸ್ತುತ ಕ್ರಿಕೆಟ್ ಜಗತ್ತಿನ ಸ್ಫೋಟಕ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಮಿಲ್ಲರ್ ಮೈದಾನದಲ್ಲಿ ಇರುವವರೆಗೂ ಯಾವುದೇ ಕ್ಷಣದಲ್ಲಿ ಬೇಕಾದರೂ ಪಂದ್ಯದ ದಿಕ್ಕನ್ನು ಬದಲಿಸಬಲ್ಲರು. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅತ್ಯಂತ ಅಪಾಯಕಾರಿ ಆಟವನ್ನಾಡುವ ಡೇವಿಡ್ ಮಿಲ್ಲರ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಉತ್ತಮ ಆಟವನ್ನಾಡಿದರು.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿರುವ ಡೇವಿಡ್ ಮಿಲ್ಲರ್ 102 ರನ್ ಬಾರಿಸಿದ್ದಾರೆ. ಸೀಮಿತ ಓವರ್ ಪಂದ್ಯಗಳಲ್ಲಿ ಅತಿ ಹೆಚ್ಚಾಗಿ ಮಿಂಚಿರುವ ಡೇವಿಡ್ ಮಿಲ್ಲರ್ ಇತ್ತೀಚಿಗಷ್ಟೆ ತಮ್ಮ ಟ್ವಿಟರ್ ಖಾತೆಯ ಮೂಲಕ ಅನುಯಾಯಿಗಳ ಜೊತೆ ಪ್ರಶ್ನೋತ್ತರ ಸಂವಾದ ನಡೆಸಿದ್ದಾರೆ. #AskMiller ಹ್ಯಾಷ್ ಟ್ಯಾಗ್ ಅಡಿಯಲ್ಲಿ ನೆಟ್ಟಿಗರು ಡೇವಿಡ್ ಮಿಲ್ಲರ್ ಬಳಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
ಹೀಗೆ ನೆಟ್ಟಿಗನೋರ್ವ ಎಂ ಎಸ್ ಧೋನಿ ಕುರಿತು ಕೆಲ ಮಾತುಗಳನ್ನು ಹಂಚಿಕೊಳ್ಳಿ ಎಂದು ಮಿಲ್ಲರ್ ಬಳಿ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ಮಿಲ್ಲರ್ ‘ಎಂಎಸ್ ಧೋನಿ ನನ್ನ ನೆಚ್ಚಿನ ಆಟಗಾರರಲ್ಲೊಬ್ಬರು, ನನ್ನ ಜೀವನದಲ್ಲಿ ಕಂಡ ಬೆಸ್ಟ್ ಫಿನಿಶರ್ ಎಂದರೆ ಅದು ಎಂಎಸ್ ಧೋನಿ. ಅವರ ವಿನಮ್ರತೆ ಮತ್ತು ಶಾಂತ ರೀತಿಯ ವರ್ತನೆ ನನಗೆ ತುಂಬಾ ಇಷ್ಟ’ ಎಂದು ಧೋನಿಯನ್ನು ಕೊಂಡಾಡಿದರು.