ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿರನ್ನು ಆಯ್ಕೆ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಇಂದು ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ವೀಕ್ಷಕರು ಘೋಷಿಸಿದ್ದಾರೆ. ಜುಲೈ 26ರಂದು ತಮ್ಮ ಸರ್ಕಾರ 2ನೇ ವರ್ಷದ ಸಂಭ್ರಮಾಚರಣೆ ನಂತರ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಹೊಸ ಸಿಎಂ ಆಯ್ಕೆ ಭಾರಿ ಕುತೂಹಲ ಕೆರಳಿಸಿತ್ತು.
ಬಿಜೆಪಿ ಸಂಸದೀಯ ಮಂಡಳಿಯಿಂದ ವೀಕ್ಷಕರಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿರನ್ನು ನೇಮಿಸಲಾಗಿತ್ತು. ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ ಅರುಣಾ ಅವರು ಕೂಡಾ ಹೊಸ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದರು. ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್ ಸಂತೋಷ್ ಹಾಗೂ ಸಹ ಕಾರ್ಯವಾಹ್ ಮುಕುಂದ್ ಅವರು ಸಂಘ ಪರಿವಾರದ ಅಭಿಮತವನ್ನು ತಿಳಿಸಿದ್ದರು ಎಂಬ ಮಾಹಿತಿ ಬಂದಿದೆ.
ಶಾಸಕಾಂಗ ಪಕ್ಷದ ನೂತನ ನಾಯಕ ನಾಳೆ(ಜುಲೈ 27) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆ ಬಳಿಕ ಮುಂದಿನ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಯನ್ನು ಮಾಡಲಾಗುತ್ತದೆ ಎಂಬ ಮಾಹಿತಿಯೂ ಇದೆ. ಉಪ ಮುಖ್ಯಮಂತ್ರಿಗಳ ಆಯ್ಕೆ ಬಗ್ಗೆ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಅಚ್ಚರಿಯ ಹೆಸರೊಂದನ್ನು ಹೈಕಮಾಂಡ್ ಘೋಷಿಸಿದೆ. ಸಿಎಂ ಸ್ಥಾನದ ರೇಸಿನಲ್ಲಿ ಲಿಂಗಾಯತ ನಾಯಕರ ಕೋಟಾದಡಿಯಲ್ಲಿ ಅರವಿಂದ್ ಬೆಲ್ಲದ್ ಹಾಗೂ ಮುರುಗೇಶ್ ನಿರಾಣಿ ಮುಂಚೂಣಿಯಲ್ಲಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ವರಿಷ್ಠರ ಒಲವು ಗಳಿಸಿದ ಬೊಮ್ಮಾಯಿಗೆ ಹಂಗಾಮಿ ಸಿಎಂ ಯಡಿಯೂರಪ್ಪ ಅವರ ಶ್ರೀರಕ್ಷೆಯೂ ದೊರೆತ್ತಿದ್ದು, ಸಿಎಂ ಆಗಿ ಶಾಸಕರ ಬೆಂಬಲವನ್ನು ಗಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ( ಸೋಮಪ್ಪ, ರಾಯಪ್ಪ) ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಇದೇ ಮೊದಲ ಬಾರಿಗೆ ತಂದೆ ಹಾಗೂ ಮಗ ಸಿಎಂ ಸ್ಥಾನಕ್ಕೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು, ಇದಕ್ಕೂ ಮುನ್ನ ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜನತಾದಳ ಸಂಯುಕ್ತ ತೊರೆದು 2008 ರಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.