ಡಿಜಿ-ಐಜಿಪಿ ಅವರಿಗೆ ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದು, ಅದು ರಾಜ್ಯ ಗೃಹ ಕಾರ್ಯದರ್ಶಿಗೆ ರವಾನೆ ಆಗಿದೆ. ಗೃಹ ಕಾರ್ಯದರ್ಶಿ ಯುಪಿಎಸ್ಸಿಗೆ ರಾಜೀನಾಮೆ ಪತ್ರ ರವಾನಿಸಲಿದ್ದಾರೆ. ರಾಜಕೀಯ ಸೇರುವ ಉದ್ದೇಶದಿಂದಲೇ ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ದು, ಬಿಜೆಪಿಗೆ ಸೇರ್ಪಡೆಯಾಗಿ ಈಗಿನಿಂದಲೇ ಸಂಘಟನೆ ಮಾಡುವ ಮುಖಾಂತರ 2021 ರ ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ದರಾಗುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಆಪ್ತ ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
1984 ಜೂ. 4 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಇ ವ್ಯಾಸಂಗ ಮಾಡಿ, ಎಂಬಿಎ ಪದವಿ ಪಡೆದಿದ್ದಾರೆ. 2011 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದಾರೆ. ಕಾರ್ಕಳ ಉಪವಿಭಾಗದ ಎಎಸ್ ಪಿಯಾಗಿ ವೃತ್ತಿ ಆರಂಭ. 2013 ರಲ್ಲಿ ಉಡುಪಿ ಎಸ್ ಪಿ.ನಂತರ ಚಿಕ್ಕಮಗಳೂರು ಎಸ್ ಪಿ ಆಗಿ ಸೇವೆ, 2018ರ ಅಗಸ್ಟ್ 17 ರಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದರು.